ADVERTISEMENT

11ನೇ ಆವೃತ್ತಿಯ ನಮ್ಮ ಬೆಂಗಳೂರು ಪ್ರಶಸ್ತಿ ಪ್ರಕ್ರಿಯೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 9:35 IST
Last Updated 8 ಜನವರಿ 2020, 9:35 IST
ನಮ್ಮ ಬೆಂಗಳೂರು ಪ್ರಶಸ್ತಿ 2020ರ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ನಮ್ಮ ಬೆಂಗಳೂರು ಪ್ರಶಸ್ತಿ 2020ರ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.   

ಬೆಂಗಳೂರು: ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್ 11ನೇ ಸಾಲಿನ “ನಮ್ಮ ಬೆಂಗಳೂರು ಪ್ರಶಸ್ತಿ 2020” (ಎನ್‌ಬಿಎ2020) ಆಯ್ಕೆಗೆ ಚಾಲನೆ ನೀಡಲಾಗಿದೆ.ನಗರದ ಕಾಲೇಜು ವಿದ್ಯಾರ್ಥಿಗಳು ಈ ಸಾಲಿನ ಪ್ರಶಸ್ತಿಗೆ ಬೆಂಗಳೂರಿಗರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಬೆಂಗಳೂರನ್ನು ಸುಂದರ ನಗರವನ್ನಾಗಿ ರೂಪಿಸಲು ಶ್ರಮಿಸಿದ ಬೆಳಕಿಗೆ ಬಾರದ ಹೀರೋಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದ್ದು, ನಿಜವಾದ ಹೀರೋಗಳಿಗೆ ಧನ್ಯವಾದ ಹೇಳುವುದು ಪ್ರಶಸ್ತಿಯ ಗುರಿ. 2009ರಿಂದ ಪ್ರಶಸ್ತಿ ನೀಡಲಾಗುತ್ತಿದೆ.

ಬೆಂಗಳೂರಿಗರು nammabengaluruawards.org ಲಾಗ್ ಆನ್ ಮಾಡಿ 2020ರ ಜನವರಿ 31ರೊಳಗೆ ವರ್ಷದ ನಾಗರಿಕ, ಉದಯೋನ್ಮುಖ ತಾರೆ, ಪತ್ರಕರ್ತ, ಸಾಮಾಜಿಕ ಉದ್ಯಮಿ, ಸರ್ಕಾರಿ ಅಧಿಕಾರಿ ಪಟ್ಟಿಯಿಂದ ನಾಮನಿರ್ದೇಶನ ಮಾಡಬೇಕಾಗುತ್ತದೆ. ಅಲ್ಲದೆ ನಗರಕ್ಕಾಗಿ ತಮ್ಮ ಜೀವನ ಪರ್ಯಂತ ಶ್ರಮಿಸಿದ ವ್ತಕ್ತಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ನೀಡಲು ಟ್ರಸ್ಟ್ ನಿರ್ಧರಿಸಿದೆ. ಆಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ 16 ಮಂದಿ ಗಣ್ಯರಿದ್ದಾರೆ. ಮಾರ್ಚ್ 28ರಂದು ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ವಿಜೇತರನ್ನು ಪ್ರಕಟಿಸಲಾಗುತ್ತದೆ.

ADVERTISEMENT

ಕಳೆದ ಹತ್ತು ವರ್ಷಗಳಲ್ಲಿ 2,80,000ಕ್ಕೂ ಹೆಚ್ಚು ಜನರು ನಾಮನಿರ್ದೇಶನಗೊಂಡು,93 ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ವಿಜೇತರಿಗೆ ಸ್ಮರಣಿಕೆ ಮಾತ್ರವಲ್ಲದೆ ನಗದು ಬಹುಮಾನ ನೀಡಲಾಗಿದೆ.

ಎನ್‌ಬಿಎ ಟ್ರಸ್ಟ್ ಗಣ್ಯರು: ಮೈಕ್ರೋಲ್ಯಾಂಡ್ ಲಿಮಿಟೆಡ್‌ನ ಅಧ್ಯಕ್ಷ ಪ್ರದೀಪ್ ಕರ್ ಅಧ್ಯಕ್ಷರಾಗಿದ್ದು, ಉಳಿದಂತೆ ನಗರ ತಜ್ಞ ಡಾ. ಅಶ್ವಿನ್ ಮಹೇಶ್, ಆಂಕಾಲಜಿ ಸರ್ಜನ್ ಡಾ. ವಿಶಾಲ್ ರಾವ್, ಎಎನ್‌ಎಂಇಎಲ್ ಮತ್ತು ನಿರ್ದೇಶಕ ಸಂಜಯ ಪ್ರಭು ಇದ್ದಾರೆ. ಚಿತ್ರನಟ ರಮೇಶ್ ಅರವಿಂದ್ ಅವರು ಬ್ರಾಂಡ್ ರಾಯಭಾರಿ. ಪ್ರಶಸ್ತಿ ಪಡೆದ ನಂತರದ ದಿನಗಳಲ್ಲಿ ವಿಜೇತರು ನಮ್ಮ ಬೆಂಗಳೂರು ಪ್ರಶಸ್ತಿಗಳ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅವರಿಂದ ಪ್ರಶಸ್ತಿ ಹಿಂಪಡೆಯಲಾಗುತ್ತದೆ ಎಂದು ಟ್ರಸ್ಟ್ ಘೋಷಿಸಿದೆ.

ನಟ ರಮೇಶ್ ಅರವಿಂದ್ ಮಾತನಾಡಿ, 'ಸಣ್ಣ ಸಣ್ಣ ಪ್ರಮಾಣದ ಕೆಲಸಗಳೇ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ನಗರದ ನಾಗರಿಕರ ಮತ್ತು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅದೇ ರೀತಿ ಸಾಮಾನ್ಯರು ತಮ್ಮದೇ ರೀತಿಯಲ್ಲಿ ಅಸಾಧಾರಣ ಕಾರ್ಯಗಳ ಮೂಲಕ ನಮ್ಮ ನಗರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಸಾಧಕರನ್ನು ಗುರುತಿಸಲು, ಗೌರವಿಸಲು ನಾಮನಿರ್ದೇಶನ ಮಾಡಿ” ಎಂದು ಮನವಿ ಮಾಡಿದರು.

ತೀರ್ಪುಗಾರರ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ ಮಾತನಾಡಿ, 'ಪ್ರಶಸ್ತಿಯ ದಶಮಾನೋತ್ಸವಕ್ಕೆ ಕಾಲಿಟ್ಟ ಅಂಗವಾಗಿ ನಮ್ಮ ಬೆಂಗಳೂರು ಪ್ರಶಸ್ತಿಗಳನ್ನು ಮುನ್ನೆಲೆಗೆ ತರಲು ಸ್ವತಂತ್ರ ಟ್ರಸ್ಟ್‌ನ್ನು ರಚಿಸಲು ತೀರ್ಮಾನಿಸಲಾಗಿದೆ. 2020ರ ಸಾಲಿನ ನಮ್ಮ ಬೆಂಗಳೂರು ಪ್ರಶಸ್ತಿಗಳು ನಮ್ಮ ನಗರದ ಅನೇಕ ಹೀರೋಗಳಿಗೆ ಹುಟ್ಟು ನೀಡಲಿದೆ ಎಂಬ ಹಾರೈಕೆ ನಮ್ಮದು ಎಂದರು.

ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್

ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಸ್ವತಂತ್ರವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರತ್ಯೇಕ ಟ್ರಸ್ಟ್ ಅನ್ನು 2019ರಲ್ಲಿ ಸಾಪಿಸಲಾಯಿತು. ಟ್ರಸ್ಟ್‌ನಲ್ಲಿ ವಿವಿಧ ಕ್ಷೇತ್ರಗಳಿಂದ ಪರಿಣಿತಿಯನ್ನು ಹೊಂದಿದ ಅರ್ಹ ವ್ಯಕ್ತಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.