ADVERTISEMENT

ಲಾಬಿ ಮಾಡಿಲ್ಲ, ಸರ್ಕಾರ ತಿರುಗಿಯೂ ನೋಡಿಲ್ಲ

ನಿವೃತ್ತ ಪ್ರಾಧ್ಯಾಪಕರಿಂದ ಹಿಂಬಾಕಿಗಾಗಿ 12 ವರ್ಷಗಳಿಂದ ಕಾತರ

​ಪ್ರಜಾವಾಣಿ ವಾರ್ತೆ
Published 23 ಮೇ 2020, 9:43 IST
Last Updated 23 ಮೇ 2020, 9:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಿವೃತ್ತಿಯಾಗುವ ವೇಳೆಯಲ್ಲೇ ಬಾಕಿ ಸಂಬಳ ಕೊಡುವುದು ನಡೆದುಕೊಂಡು ಬಂದ ಪದ್ಧತಿ. ಆದರೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸುಮಾರು 400ರಷ್ಟು ನಿವೃತ್ತ ಪ್ರಾಧ್ಯಾಪಕರು ತಮ್ಮ ಹಿಂಬಾಕಿಗಾಗಿ 12 ವರ್ಷಗಳಿಂದ ಕಾಯುತ್ತಲೇ ಇದ್ದಾರೆ!

ಇವರ ಜತೆಯಲ್ಲೇ ನಿವೃತ್ತರಾದವರಲ್ಲಿ ಲಾಬಿ ಮಾಡಿದವರು, ಕೋರ್ಟ್‌ಗೆ ಹೋದವರು ಬಾಕಿ ದಕ್ಕಿಸಿಕೊಂಡಿದ್ದರು. ಗಾಂಧಿ ಮಾರ್ಗವನ್ನು ತುಳಿದ ಕಾರಣಕ್ಕೆ ಇವರತ್ತ ಸರ್ಕಾರ ಇದುವರೆಗೆ ತಿರುಗಿಯೂ ನೋಡಿಲ್ಲ.

‘ಹನ್ನೆರಡು ವರ್ಷ ಕಳೆದರೂ ಆರನೇ ವೇತನ ಆಯೋಗದ ಯುಜಿಸಿ ಹಿಂಬಾಕಿ ಪಾವತಿಸಿಲ್ಲ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ, ವಯೋವೃದ್ಧರ ಹಿತ ಕಾಪಾಡಬೇಕು’ ಎಂದು ಈ ನಿವೃತ್ತ ಪ್ರಾಧ್ಯಾಪಕರು ಒತ್ತಾಯಿಸಿದ್ದಾರೆ.

ADVERTISEMENT

‘ಸರ್ಕಾರದ ಮೇಲೆ ಒತ್ತಡ ತಂದ ಪ್ರಾಧ್ಯಾಪಕರಿಗೆ ಈಗಾಗಲೇ ಹಿಂಬಾಕಿ ಪಾವತಿಸಲಾಗಿದೆ. ಕೆಲವರು ನ್ಯಾಯಾಲಯದ ಮೊರೆ ಹೋಗಿ, ಕೋರ್ಟ್‌ ಆದೇಶದ ಮೂಲಕ ಬಾಕಿ ಪಡೆದಿದ್ದಾರೆ. ಆದರೆ, 2012ಕ್ಕಿಂತ ಮುನ್ನ ನಿವೃತ್ತರಾದ ಪ್ರಾಧ್ಯಾಪಕರು ಒಟ್ಟಾಗಿ ಸೇರಿ, ಸರ್ಕಾರದ ಮೇಲೆ ಒತ್ತಡ ಹೇರುವುದಾಗಲಿ, ನ್ಯಾಯಾಲಯದ ಮೊರೆ ಹೋಗುವುದಾಗಲಿ ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘ಸರ್ಕಾರದ ನಿಯಮದ ಪ್ರಕಾರ, ಹಿಂಬಾಕಿಗಳೇನಾದರೂ ಇದ್ದರೆ ಅದನ್ನು ನಿವೃತ್ತಿಯ ದಿನವೇ ಪಾವತಿಸಬೇಕಾಗಿರುತ್ತದೆ. ಆದರೆ, ನಾವು ನಿವೃತ್ತರಾಗಿ ದಶಕ ಕಳೆದರೂ ಬಾಕಿ ಪಾವತಿ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸರ್ಕಾರವು 2006ರ ಹಿಂಬಾಕಿ ಪಾವತಿಸದೆ, 2016ರ ಯುಜಿಸಿ ವೇತನ ಶ್ರೇಣಿಯ (7ನೇ ವೇತನ ಆಯೋಗದ ಶ್ರೇಣಿ) ಹಿಂಬಾಕಿಯನ್ನು ಪಾವತಿಸಲು ಕ್ರಮ ಕೈಗೊಂಡಿದೆ. ಇದು 2006 ವೇತನ ಶ್ರೇಣಿಯ ನಿವೃತ್ತ ಪ್ರಾಧ್ಯಾಪಕರಿಗೆ ಮಾಡುವ ಅನ್ಯಾಯ’ ಎಂದೂ ದೂರಿದ್ದಾರೆ.

ಯಾರಿಗೂ ಅನ್ಯಾಯ ಅಗಲು ಬಿಡುವುದಿಲ್ಲ: ‘ನಿವೃತ್ತ ಪ್ರಾಧ್ಯಾಪಕರ ಬೇಡಿಕೆ ನ್ಯಾಯೋಚಿತವೇ. ಅವರೂ ನಮ್ಮವರೇ. ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಆದರೆ ಈ ಹಿಂದೆ ಹೆಚ್ಚುವರಿ ಪಾವತಿಯಂತಹ ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಬಳಿಕ ಹಿಂಬಾಕಿಯ ಬಗ್ಗೆ ತಿಳಿಸಲಾಗುವುದು’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.