ADVERTISEMENT

12ನೇ ಶತಮಾನದ ಶಿಕ್ಷಣದ ಸಂಶೋಧನೆ ಅಗತ್ಯ: ಪ್ರೊ. ಜಿ.ಎಸ್.ಸಿದ್ದಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 19:28 IST
Last Updated 11 ಜನವರಿ 2025, 19:28 IST
ನಗರದ ಚಿತ್ರಕಲಾ ಪರಿಷತ್ತಿನಲ್ಲಿ 'ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ ಜಿ.ಎಸ್. ಸಿದ್ಧಲಿಂಗಯ್ಯ ಅವರಿಗೆ ಬಸವ ಪ್ರಶಸ್ತಿ ‍ಪ್ರದಾನ ಮಾಡಲಾಯಿತು. ಶರಣಗೌಡ ಪಾಟೀಲ ಪಾಳಾ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆ.ವಿ. ನಾಗರಾಜಮೂರ್ತಿ ಮತ್ತು  ಬಿ.ಆರ್. ಪಾಟೀಲ ಪಾಲ್ಗೊಂಡಿದ್ದರು.   ಪ್ರಜಾವಾಣಿ ಚಿತ್ರ
ನಗರದ ಚಿತ್ರಕಲಾ ಪರಿಷತ್ತಿನಲ್ಲಿ 'ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ ಜಿ.ಎಸ್. ಸಿದ್ಧಲಿಂಗಯ್ಯ ಅವರಿಗೆ ಬಸವ ಪ್ರಶಸ್ತಿ ‍ಪ್ರದಾನ ಮಾಡಲಾಯಿತು. ಶರಣಗೌಡ ಪಾಟೀಲ ಪಾಳಾ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆ.ವಿ. ನಾಗರಾಜಮೂರ್ತಿ ಮತ್ತು  ಬಿ.ಆರ್. ಪಾಟೀಲ ಪಾಲ್ಗೊಂಡಿದ್ದರು.   ಪ್ರಜಾವಾಣಿ ಚಿತ್ರ   

ಬೆಂಗಳೂರು: 12ನೇ ಶತಮಾನದ ಶಿಕ್ಷಣ ಪದ್ಧತಿ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಕವಿ ಪ್ರೊ. ಜಿ.ಎಸ್.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಕಲಬುರಗಿಯ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಸವ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಪ್ರಶಸ್ತಿಯು ₹50 ಸಾವಿರ ನಗದು, ಫಲಕ ಮತ್ತು ಪ್ರಮಾಣಪತ್ರ ಒಳಗೊಂಡಿದೆ.

‘20ನೇ ಶತಮಾನದಲ್ಲಿ ವಯಸ್ಕರ ಶಿಕ್ಷಣ ಜಾರಿಗೆ ತರಲಾಯಿತು. ಶಾಲೆಯಿಂದ ಹೊರಗುಳಿವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. 12ನೇ ಶತಮಾನದಲ್ಲಿದ್ದ ವಚನಕಾರರಿಗೆ ಎಂತಹ ಶಿಕ್ಷಣ ದೊರಕಿತ್ತು ಎಂದು ಅಧ್ಯಯನ ನಡೆಸಿದರೆ ಅಚ್ಚರಿ ಅಂಶಗಳು ಸಿಗುತ್ತವೆ‘ ಎಂದು ಹೇಳಿದರು.

ADVERTISEMENT

ಕೆಲವರು ಬಸವಣ್ಣನ ಅಸ್ತಿತ್ವದ ಬಗ್ಗೆಯೇ ಪ್ರಶ್ನಿಸಿದ್ದರು. 27 ಶಾಸನಗಳಲ್ಲಿ ಬಸವಣ್ಣನ ಉಲ್ಲೇಖವಿದೆ, ಎಂಟು ಶಾಸನಗಳಲ್ಲಿ ಬಸವಣ್ಣನಿಗೆ ಸಂಬಂಧಿಸಿದ ಖಚಿತವಾದ ಮಾಹಿತಿ ಇದೆ. ಅನುಭವ ಮಂಟಪವನ್ನು ಈಗಿನ ಜನತಾ ಪಾರ್ಲಿಮೆಂಟ್ ಎನ್ನಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಸವರಾಜ ಸಾದರ, ‘ಗುರುಶ್ರೇಷ್ಠ ಸಿದ್ದಲಿಂಗಯ್ಯ ಅವರಿಗೆ ಬಸವ ಪ್ರಶಸ್ತಿ ಬಂದಿರುವುದು ಒಳ್ಳೆಯದು. ಅನುವಾದ, ವಚನ ಸಾಹಿತ್ಯ, ಕವನ ಸಂಕಲನ ಪ್ರಕಟಿಸಿರುವ ಸಿದ್ದಲಿಂಗಯ್ಯ ಅವರಿಗೆ ಪಂಪ ಹಾಗೂ ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಹರು’ ಎಂದು ತಿಳಿಸಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಮರ್ಶಕಿ ಎಂ.ಎಸ್.ಆಶಾದೇವಿ ಮಾತನಾಡಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ, ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ, ಲೇಖಕ ರುದ್ರೇಶ ಅದರಂಗಿ ಉಪಸ್ಥಿತರಿದ್ದರು. ಮೃತ್ಯಂಜಯ ದೊಡ್ಡವಾಡ, ಸವಿತಾ ಪ್ರಸಾದ್ ಅವರು ವಚನ ಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.