ADVERTISEMENT

130 ಪ್ರಕರಣ ಪತ್ತೆ, 1.35 ಕೋಟಿ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 20:15 IST
Last Updated 20 ಏಪ್ರಿಲ್ 2011, 20:15 IST

ಬೆಂಗಳೂರು: ಸುಲಿಗೆ, ಸರ ದರೋಡೆ, ಕಳವು ಮುಂತಾದ 130 ಪ್ರಕರಣಗಳನ್ನು ಭೇದಿಸಿರುವ ಈಶಾನ್ಯ ವಿಭಾಗದ ಪೊಲೀಸರು 1.35 ಕೊಟಿ ರೂಪಾಯಿ ಮೌಲ್ಯದ ಆಭರಣ, ವಾಹನ ಮತ್ತಿತರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಒಂದೂವರೆ ತಿಂಗಳಲ್ಲಿ 68 ಮಂದಿ ಆರೋಪಿಗಳನ್ನು ಬಂಧಿಸಿ ಪ್ರಮುಖ ಪ್ರಕರಣಗಳನ್ನು ಭೇದಿಸಿದ್ದಾರೆ. ಎರಡೂ ಕಾಲು ಕೆ.ಜಿ ಚಿನ್ನಾಭರಣ, 51 ದ್ವಿಚಕ್ರ ವಾಹನ, ಹದಿನಾಲ್ಕು ಕಾರುಗಳು ಹಾಗೂ ಇತರೆ ವಸ್ತುಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ಈಶಾನ್ಯ ವಿಭಾಗದ ಡಿಸಿಸಿ ಬಿ.ಆರ್ ರವಿಕಾಂತೇಗೌಡ ಅವರ ತಂಡಕ್ಕೆ ರೂ. ಒಂದೂವರೆ ಲಕ್ಷ  ಬಹುಮಾನ ನೀಡಲಾಗುತ್ತದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ಘೋಷಿಸಿದರು.

‘ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಚಂದ್ರ, ವಿನೋದ್ ರಾಜ್, ಶಬ್ಬೀರ್ ಮತ್ತು ಮುರಳಿ ಎಂಬುವರನ್ನು ಬಂಧಿಸಿರುವ ಯಲಹಂಕ ಪೊಲೀಸರು 21 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಚೇರಿ ಮತ್ತು ಮನೆಯ ಮುಂದೆ ನಿಲ್ಲಿಸಿರುತ್ತಿದ್ದ ಬೈಕ್‌ಗಳನ್ನು ಅವರು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಒಟ್ಟು 19 ಪ್ರಕರಣಗಳು ಬಗೆಹರಿದಿವೆ’ ಎಂದು ಅವರು ಮಾಹಿತಿ ನೀಡಿದರು.

ರೋಗಿಗಳನ್ನು ದೋಚುತ್ತಿದ್ದವನ ಬಂಧನ: ವಾರ್ಡ್ ಬಾಯ್ ಎಂದು ಹೇಳಿಕೊಂಡು ರೋಗಿಗಳನ್ನು ದೋಚುತ್ತಿದ್ದ ರಾಜು ಉರುಫ್ ರಾಜೇಶ್ ಉರುಪ್ ರಾಜೇಶ್ ಅರ್ಜುನ್ ಬರಸ್ಕಾಳೆ (27) ಎಂಬಾತನನ್ನು ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ಐವತ್ತು ಸಾವಿರ ರೂಪಾಯಿ ಮೌಲ್ಯದ ಎರಡು ಚಿನ್ನದ ಬಳೆಗಳನ್ನು ಜಪ್ತಿ ಮಾಡಿದ್ದಾರೆ.

ಕೊಡಿಗೇಹಳ್ಳಿಯಲ್ಲಿರುವ ಕಾವೇರಿ ಮೆಡಿಕಲ್ ಸೆಂಟರ್‌ಗೆ ಬಂದಿದ್ದ ಮಹಿಳಾ ರೋಗಿಯೊಬ್ಬರನ್ನು ಆರೋಪಿ ದೋಚಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ವಾರ್ಡ್‌ಗೆ ವರ್ಗಾಯಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಅವರ ಬಳೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ವೈದ್ಯರಾಗಿದ್ದ ರಾಜು ಅವರ ತಂದೆ ತಾಯಿ ಕೆಲ ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ಆತ ಅಪರಾಧ ಚಟುವಟಿಕೆ ಮಾಡುತ್ತಿದ್ದ. ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆತ ಹುಬ್ಬಳ್ಳಿಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರ ಬ್ಯಾಗ್‌ನಿಂದ ಮೊಬೈಲ್ ಫೋನ್ ಮತ್ತು ಕ್ಯಾಮೆರಾ ಕಳವು ಮಾಡುತ್ತಿದ್ದ ಗುರುಪ್ರಸಾದ್, ಮುರಳಿ, ಮೂರ್ತಿ, ನಾಗರಾಜ, ಪ್ರಭು, ಸಂತೋಷ್ ಮತ್ತು ಗಿರೀಶ್ ಎಂಬುವರನ್ನು ಬಂಧಿಸಿ ಅವರಿಂದ 4.35 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಮತ್ತು 1.80 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸೆವೆನ್‌ಸ್ಟಾರ್ ಏಜೆನ್ಸಿ ಮತ್ತು ಮೆಂಜೆಸ್ ಏವಿಯೇಷನ್‌ನ ನೌಕರರಾಗಿದ್ದರು’ ಎಂದು ಬಿ.ಆರ್ ರವಿಕಾಂತೇಗೌಡ ತಿಳಿಸಿದರು.

ಎಸಿಪಿಗಳಾದ ಬಿ. ರಾಮಚಂದ್ರಪ್ಪ, ಪುಟ್ಟಸ್ವಾಮಿಗೌಡ, ಜಾರ್ಜ್ ಜಾಯ್ ಡಿಸೊಜಾ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎಂ.ಎಚ್ ಉಮೇಶ್, ಈ. ಕೆಂಚೇಗೌಡ, ಕೆ. ಚಂದ್ರಶೇಖರ್, ವಿದ್ಯಾಧರ ದತ್ತರಾಮ ಕಾಯ್ಕೇರಿಕರ, ವೈಜನಾಥ್, ಆರ್. ಜಯರಾಂ, ಎಂ.ಎಸ್ ಅಶೋಕ್, ಸಿ. ಬಾಲಕೃಷ್ಣ ಮತ್ತು ರತ್ನಾಕರಶೆಟ್ಟಿ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ. ಸುನಿಲ್ ಕುಮಾರ್ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.