ADVERTISEMENT

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: 13ನೇ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 0:12 IST
Last Updated 17 ಮಾರ್ಚ್ 2024, 0:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ 13ನೇ ಆರೋಪಿಯಾಗಿರುವ ಸುಜಿತ್ ಕುಮಾರ್‌ಗೆ ಬೆಂಗಳೂ ರಿನ ಸೆಷನ್ಸ್‌ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಮೋಹನ್ ನಾಯಕ್‌ಗೆ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿತ್ತು. ಅದರ ಆಧಾರದಲ್ಲಿ ಜಾಮೀನು ಕೋರಿ ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿಯ ಸುಜಿತ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್‌ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ್ ಪೈ ಬಿ. ಅವರು ತಿರಸ್ಕರಿಸಿದ್ದಾರೆ.

ADVERTISEMENT

‘ಆರೋಪಿ ಸುಜಿತ್ ಅವರು 2010ರಿಂದಲೂ ಸಂಘಟಿತ ಅಪರಾಧ ಸಂಘದ ಸದಸ್ಯನಾಗಿದ್ದು, ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಇತರೆ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ. ಹೀಗಾಗಿ, ಆತನ ವಿರುದ್ಧ ಮೇಲ್ನೋಟಕ್ಕೆ ದಾಖಲೆಗಳಿವೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಸುಜಿತ್ ವಿರುದ್ಧ ಉಪ್ಪಾರಪೇಟೆ, ಮಹಾರಾಷ್ಟ್ರದ ಕಾಳಚೌಕಿ, ದಾವಣಗೆರೆ ಲೇಔಟ್, ಉಡುಪಿ ನಗರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಇಲ್ಲಿನ ಕೆಲವು ಪ್ರಕರಣ
ಗಳಲ್ಲಿ ಆತ ಸ್ಫೋಟಕಗಳ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿ ಆರೋಪಿಯಾಗಿದ್ದಾನೆ. ಹೀಗಾಗಿ, ಮೋಹನ್ ನಾಯಕ್ ಪ್ರಕರಣಕ್ಕಿಂತ ಸುಜಿತ್ ಪ್ರಕರಣ ಭಿನ್ನವಾಗಿದೆ’ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

‘2022ರ ಜುಲೈ 4ರಂದು ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಇಲ್ಲಿಯವರೆಗೆ 527 ಸಾಕ್ಷಿಗಳ ಪೈಕಿ ಪ್ರಾಸಿಕ್ಯೂಷನ್ 119 ಸಾಕ್ಷಿಗಳ ವಿಚಾರಣೆ ನಡೆಸಿದೆ. ಹಾಲಿ ಪ್ರಕರ ಣವನ್ನು ತುರ್ತಾಗಿ ನಿರ್ಧರಿಸುವ ಸಂಬಂಧ ರಾಜ್ಯ ಸರ್ಕಾರವು ವಿಶೇಷ ನ್ಯಾಯಾಲಯ ಆರಂಭಿಸುವ ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ, ಪ್ರಕರಣದ ಗಂಭೀರತೆ ಅರಿತು ಜಾಮೀನು ನೀಡಲು ವಿಚಾರಣೆ ಮುಕ್ತಾಯಗೊಳ್ಳುವುದು ವಿಳಂಬವಾಗಲಿದೆ ಎಂಬ ಆಧಾರವನ್ನು ಒಪ್ಪಲಾಗದು’ ಎಂದು ನ್ಯಾಯಾಲಯ ಹೇಳಿದೆ.

‘ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಅಥವಾ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆರೋಪಿ ಸಲ್ಲಿಸಿಲ್ಲ. ಹೀಗಾಗಿ, ಯಾವುದೇ ಸಕಾರಣ ಇಲ್ಲದಿರು ವುದರಿಂದ ಸುಜಿತ್ ಅರ್ಜಿಯನ್ನು ವಜಾ ಮಾಡಲಾಗಿದೆ’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.