ಬೆಂಗಳೂರು: `ಮಕ್ಕಳಲ್ಲಿರುವ ಅಪೌಷ್ಟಿಕತೆ ತಡೆಗಟ್ಟಲು ಪಾಲಿಕೆ ವ್ಯಾಪ್ತಿಯ ಆರು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜುಲೈ 15ರಿಂದ ಹಮ್ಮಿಕೊಳ್ಳಲಾಗುವುದು~ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳ ಮುಖ್ಯಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆಗೆ ಇತ್ತೀಚೆಗೆ ಸಭೆ ನಡೆಸಿದ ಅವರು, `ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ವಲಯ ಮಟ್ಟದಲ್ಲಿ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು, ಸ್ವಯಂಸೇವಾ ಸಂಘದ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಿಂದ ಮಕ್ಕಳ ತಪಾಸಣೆಗಾಗಿ ಅವಶ್ಯಕವಾದ ವೈದ್ಯಕೀಯ ಉಪಕರಣಗಳ ಏರ್ಪಾಡು ಹಾಗೂ ಶಿಬಿರಕ್ಕಾಗಿ ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ. ಈ ಶಿಬಿರದಲ್ಲಿ ಮಕ್ಕಳ ತಜ್ಞರಿಂದ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು~ ಎಂದರು.
`ಜುಲೈ 8ರಿಂದ 14ರ ವರೆಗೆ ಪಾಲಿಕೆಯ ಆರೋಗ್ಯ ವಿಭಾಗದ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಕ್ಕಳ ತಪಾಸಣೆ ನಡೆಸಿ, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರೋಗ್ಯ ಶಿಬಿರಗಳಿಗೆ ಕರೆತರಬೇಕು ಎಂದು ಪೋಷಕರನ್ನು ವಿನಂತಿಸುವರು. ಈ ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಕೆಯ ಸಿಬ್ಬಂದಿಯ ಜೊತೆಗೆ ಸಹಕರಿಸಬೇಕು~ ಎಂದರು.
`ಪಾಲಿಕೆಯ ಎಲ್ಲಾ ವಾರ್ಡ್‌ಗಳ ರೆಫರಲ್ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಆರೋಗ್ಯ ಕೇಂದ್ರ, ಔಷಧಾಲಯ, ಇ.ಎಸ್.ಐ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ರೈಲ್ವೆ ಆಸ್ಪತ್ರೆಗಳು ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರಗಳಲ್ಲಿ ಮಕ್ಕಳ ತಪಾಸಣೆಗಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.