ADVERTISEMENT

16ನೇ ಅಖಿಲ ಭಾರತ ಅಣಕು ನ್ಯಾಯಾಲಯ ಕಲಾಪ ಸ್ಪರ್ಧೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 20:10 IST
Last Updated 26 ಫೆಬ್ರುವರಿ 2012, 20:10 IST
16ನೇ ಅಖಿಲ ಭಾರತ ಅಣಕು ನ್ಯಾಯಾಲಯ ಕಲಾಪ ಸ್ಪರ್ಧೆ ಸಮಾರೋಪ
16ನೇ ಅಖಿಲ ಭಾರತ ಅಣಕು ನ್ಯಾಯಾಲಯ ಕಲಾಪ ಸ್ಪರ್ಧೆ ಸಮಾರೋಪ   

ಬೆಂಗಳೂರು: `ಕಾನೂನು ವಿದ್ಯಾರ್ಥಿಗಳು ತಮ್ಮ ಭಯ ಹಾಗೂ ಹಿಂಜರಿಕೆಯನ್ನು ಬಿಟ್ಟು ತಮ್ಮ ವಿಚಾರಗಳ ಮಂಡನೆಗೆ ಧೈರ್ಯವಾಗಿ ಮುಂದಾಗಬೇಕು~ ಎಂದು ಹೈ ಕೋರ್ಟ್ ನ್ಯಾಯಮೂರ್ತಿ ಡಾ.ಭಕ್ತ ವತ್ಸಲ ಕರೆ ನೀಡಿದರು.

ನಗರದ ಜ್ಞಾನಭಾರತಿ ಆವರಣದ ಸೆನೆಟ್ ಸಭಾಂಗಣದಲ್ಲಿ ಭಾನುವಾರ ವಿಶ್ವವಿದ್ಯಾಲಯ ಕಾನೂನು ಕಾಲೇಜು ಆಯೋಜಿಸಿದ್ದ `16 ನೇ ಅಖಿಲ ಭಾರತ ಅಣಕು ನ್ಯಾಯಾಲಯ ಕಲಾಪ ಸ್ಪರ್ಧೆ~ ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಸಮಾಜದಲ್ಲಿ ವಕೀಲರಿಗೆ ವಿಶೇಷವಾದ ಸ್ಥಾನವಿದೆ. ವಕೀಲರು ಹಾಗೂ ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಇದೆ. ಹೀಗಾಗಿ ಯುವ ಕಾನೂನು ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳ ಬಗ್ಗೆಯೂ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು~ ಎಂದರು.

`ಕಾಲೇಜುಗಳು ನಡೆಸುವ ಅಣಕು ನ್ಯಾಯಾಲಯ ಕಲಾಪಗಳಿಂದ ಕಾನೂನು ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ನ್ಯಾಯಮೂರ್ತಿಗಳ ಮುಂದೆಯೇ ವಾದ ಮಂಡಿಸುವ ಅವಕಾಶ ವಿದ್ಯಾರ್ಥಿಗಳಿಗೆ ದೊರೆಯುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಬರಹದ ಭಾಷೆ, ಮಾತಿನ ಭಾಷೆ ಹಾಗೂ ದೇಹ ಭಾಷೆಯನ್ನು ಉತ್ತಮವಾಗಿಸಿಕೊಳ್ಳುವ ಮೂಲಕ ಯಶಸ್ಸು ಗಳಿಸಲು ಸಾಧ್ಯ. ಈ ಮೂರು ಅಂಶಗಳನ್ನು ಮರೆತರೆ ಕಾನೂನು ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಗೆಲವು ಸಾಧಿಸಲು ಸಾಧ್ಯವಿಲ್ಲ~ ಎಂದು ನುಡಿದರು.

ನ್ಯಾಯಮೂರ್ತಿ ರಾಮ ಮೋಹನ್ ರೆಡ್ಡಿ ಮಾತನಾಡಿ, `ವಕೀಲರಾಗುವ ಮೂಲಕ ಉತ್ತಮ ರಾಜಕಾರಣಿ ಹಾಗೂ ಆಡಳಿತಗಾರರಾಗುವ ಅವಕಾಶ ಕಾನೂನು ವಿದ್ಯಾರ್ಥಿಗಳಿಗಿದೆ. ವಕೀಲರು ಕೇವಲ ಕಾನೂನು ವಿಷಯಗಳ ಬಗ್ಗೆ ಮಾತ್ರ ತಿಳಿದುಕೊಳ್ಳಲು ಬಯಸದೇ ಎಲ್ಲ ವಿಚಾರಗಳ ಬಗ್ಗೆಯೂ ಪ್ರಭುತ್ವ ಸಾಧಿಸಬೇಕು. ಇದರಿಂದ ವಕೀಲರ ಮನೋಬಲ ಗಟ್ಟಿಯಾಗುತ್ತದೆ~ ಎಂದು ಅವರು ಅಭಿಪ್ರಾಯ ಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಮಾತನಾಡಿ, `ವಿಶ್ವವಿದ್ಯಾಲಯ ಕಾನೂನು ಕಾಲೇಜಿಗೆ ಭವ್ಯವಾದ ಇತಿಹಾಸವಿದೆ. ನಿವೃತ್ತ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ, ಎನ್.ವೆಂಕಟಾಚಲ, ಎನ್.ಸಂತೋಷ ಹೆಗ್ಡೆ ಸೇರಿದಂತೆ ಹಲವು ಕಾನೂನು ತಜ್ಞರು ಹಾಗೂ ರಾಜಕೀಯ ರಂಗದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯಿಲಿ ಮುಂತಾದವರು ಈ ಕಾಲೇಜಿನಲ್ಲಿಯೇ ಕಾನೂನು ಅಭ್ಯಾಸ ಮಾಡಿದವರು. ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಕಲಾಪಗಳನ್ನು ಆಯೋಜಿಸುತ್ತಾ ಬಂದಿರುವ ಕಾಲೇಜಿನ ಕೆಲಸ ಉತ್ತಮವಾದುದು. ಕಾನೂನು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದು ತಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು~ ಎಂದರು.

ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳ 28 ಕಾಲೇಜುಗಳಿಂದ ಸುಮಾರು 200 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನಲ್ಲಿದ್ದ ಹರಿಯಾಣದ ಓ.ಪಿ.ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ವಿಜೇತರಾದರು. ಪಟಿಯಾಲದ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರನ್ನರ್ ಅಪ್ ಆದರು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುಭಾಷ್ ಬಿ. ಆದಿ, ಬಿ.ವಿ.ನಾಗರತ್ನ, ಅರವಿಂದ್ ಕುಮಾರ್, ಬೆಂಗಳೂರು ವಿ.ವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಟಿ.ಆರ್.ಸುಬ್ರಹ್ಮಣ್ಯ, ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ. ಹನುಮಂತರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.