ADVERTISEMENT

18ಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 18:55 IST
Last Updated 4 ಆಗಸ್ಟ್ 2012, 18:55 IST

ಬೆಂಗಳೂರು: ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ `ಸೂಪರ್ ಸ್ಪೆಷಾಲಿಟಿ~ ಆಸ್ಪತ್ರೆಯ ಉದ್ಘಾಟನೆ ಇದೇ 18ರಂದು ನೆರವೇರಲಿದೆ.

ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರು ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ.ರಾಮದಾಸ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾದರಿಯಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುತ್ತಿದ್ದು, ಅದರ ಒಂದು ಭಾಗವಾಗಿ ಈ ಆಸ್ಪತ್ರೆ ನಿರ್ಮಿಸಲಾಗಿದೆ. ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಸಂಗೀತ ಥೆರಪಿ ಘಟಕ ಸ್ಥಾಪಿಸಲಾಗಿದೆ. ವಾಣಿವಿಲಾಸ ಆಸ್ಪತ್ರೆಯಲ್ಲಿ 20 ಹಾಸಿಗೆಯ ಅಪೌಷ್ಟಿಕ ಮಕ್ಕಳ ಚಿಕಿತ್ಸಾ ಕೇಂದ್ರ ಕೂಡ ಸ್ಥಾಪಿಸುತ್ತಿದ್ದು, ಅದರ ಉದ್ಘಾಟನೆಯೂ ನಡೆಯಲಿದೆ.

200 ಮಂದಿ ನರ್ಸ್‌ಗಳು ಹಾಗೂ ತಜ್ಞ ವೈದ್ಯರ ನೇಮಕ ಕೂಡ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಗಲುತ್ತಿದ್ದ ವೆಚ್ಚವೇ ಹೈಟೆಕ್ ಆಸ್ಪತ್ರೆಯಲ್ಲೂ ಆಗಲಿದೆ. ಆಸ್ಪತ್ರೆ ಸಂಪೂರ್ಣ ಹವಾನಿಯಂತ್ರಿತವಾಗಿರುವ ಕಾರಣ ದರಗಳನ್ನು ಹೆಚ್ಚಿಸುವ ಉದ್ದೇಶ ಇದೆ. ಎಲ್ಲ ರೀತಿಯ ಹೈಟೆಕ್ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.