ಬೆಂಗಳೂರು: `ನಮ್ಮ ಮೆಟ್ರೊ'ದ ಎರಡನೇ ಹಂತದ ಯೋಜನೆ ಕಾಮಗಾರಿಯಿಂದ ಜಯನಗರದ ಲಕ್ಷ್ಮಣರಾವ್ ಉದ್ಯಾನದ ಮತ್ತಷ್ಟು ಭಾಗ ಹಾಳಾಗುವ ಅಪಾಯವಿದೆ ಎಂದು ಜಯನಗರದ ವಿವಿಧ ಬ್ಲಾಕ್‌ಗಳ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ `ಸಮನ್ವಯ ವೇದಿಕೆ' ಆತಂಕ ವ್ಯಕ್ತಪಡಿಸಿದೆ.
ಲಕ್ಷ್ಮಣರಾವ್ ಉದ್ಯಾನವನ್ನು ರಕ್ಷಿಸುವ ಸಲುವಾಗಿ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ರೀಚ್- 5ರ ಮಾರ್ಗದ ಕಾಮಗಾರಿಯನ್ನು ಬೇರೆಡೆಯಿಂದ ಆರಂಭಿಸುವಂತೆ ವೇದಿಕೆಯು ಮನವಿ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ವೇದಿಕೆ ಮನವಿ ಸಲ್ಲಿಸಿದೆ.
`ಎರಡನೇ ಹಂತದ ಯೋಜನೆಗಾಗಿ 6ನೇ ಬ್ಲಾಕ್‌ನ 30ನೇ ಕ್ರಾಸ್‌ನಿಂದ 8ನೇ ಬ್ಲಾಕ್‌ನ 46ನೇ ಕ್ರಾಸ್‌ವರೆಗೆ ಉದ್ಯಾನದ ಪೂರ್ವಭಾಗವು ಸಂಪೂರ್ಣವಾಗಿ ಬಳಕೆಯಾಗಲಿದೆ. ಇದು ಈ ಭಾಗದ ನಿವಾಸಿಗಳಿಗೆ ಆಘಾತ ಉಂಟು ಮಾಡಿದೆ' ಎಂದು ತಿಳಿಸಲಾಗಿದೆ.
`ಸೌತ್‌ಎಂಡ್ ವೃತ್ತದಿಂದ ದಕ್ಷಿಣಕ್ಕೆ ಸುಮಾರು 2 ಕಿ.ಮೀ. ಉದ್ದವಿರುವ ಲಕ್ಷ್ಮಣರಾವ್ ಉದ್ಯಾನವು ಇಡೀ ಏಷ್ಯಾದಲ್ಲೇ ಅಪರೂಪದ ಉದ್ಯಾನವಾಗಿದೆ. ಉದ್ದನೆಯ ಹಸಿರು ಪಟ್ಟಿಯಂತಿರುವ ಈ ಉದ್ಯಾನಕ್ಕೆ ಪಾರಂಪರಿಕ ಉದ್ಯಾನ ಎನಿಸಿಕೊಳ್ಳುವ ಅರ್ಹತೆ ಇದೆ. ಈ ಉದ್ಯಾನಗಳು ನಮಗೆ ಹಿರಿಯರು ನೀಡಿದ ಬಳುವಳಿ. ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಉದ್ಯಾನಗಳನ್ನು ರಕ್ಷಿಸಬೇಕಾಗಿರುವುದು ಎಲ್ಲರ ಕರ್ತವ್ಯ' ಎಂದು ವಿವರಿಸಲಾಗಿದೆ.
`ಆರ್.ವಿ ರಸ್ತೆಯಲ್ಲಿ ಸೌತ್ ಎಂಡ್ ವೃತ್ತದಿಂದ ಜಯನಗರದ 8ನೇ ಬ್ಲಾಕ್‌ನ 40ನೇ ಕ್ರಾಸ್‌ವರೆಗೆ ನಿರ್ಮಿಸಿರುವ ಎರಡು ಮೆಟ್ರೊ ನಿಲ್ದಾಣಗಳಿಗಾಗಿ ಉದ್ಯಾನದ ಒಂದಷ್ಟು ಭಾಗವನ್ನು ಬಳಸಿಕೊಳ್ಳಲಾಗಿದೆ. ಈಗ ಎರಡನೇ ಹಂತದ ಯೋಜನೆಗೂ ಉದ್ಯಾನದ ಜಾಗ ಬಳಸುವುದರಿಂದ ಉದ್ಯಾನ ಮತ್ತಷ್ಟು ಕಿರಿದಾಗುವ ಸಾಧ್ಯತೆ ಇದೆ' ಎಂದು ಅಭಿಪ್ರಾಯಪಡಲಾಗಿದೆ.
ಸಮಾಲೋಚನೆಗೆ ಆಗ್ರಹ
ಎರಡನೇ ಹಂತದ ಯೋಜನೆಯನ್ನು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರು ಹಾಗೂ ಬಡಾವಣೆ ನಿವಾಸಿಗಳ ಜೊತೆಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ವೇದಿಕೆ ಆಗ್ರಹಿಸಿದೆ.
ಅತ್ಯಂತ ಕಡಿಮೆ ಉದ್ಯಾನ ನಷ್ಟ ಹಾಗೂ ಅತ್ಯಂತ ಕಡಿಮೆ ಖಾಸಗಿ ಆಸ್ತಿಗಳ ಸ್ವಾಧೀನಕ್ಕೆ ಗಮನ ನೀಡಿ ಎಂಜಿನಿಯರಿಂಗ್ ಮೂಲ ತತ್ವಗಳಿಗೆ ಅನುಗುಣವಾಗಿ ಪರ್ಯಾಯ ಯೋಜನೆ ರೂಪಿಸಲು ಸೂಚಿಸಬೇಕು. ನಗರದ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಲಾಗಿದೆ.
ನಿಗಮದ ಅಧಿಕಾರಿಗಳು ಯಾವುದೇ ಪರ್ಯಾಯ ಯೋಜನೆಗಳಿಗೆ ಕಿವಿಗೊಡುತ್ತಿಲ್ಲ. ಅಧಿಕಾರಿಗಳ ಹಠಮಾರಿ ಧೋರಣೆಯಿಂದ ಪರಿಸರ ನಾಶವಾಗುತ್ತಿದೆ. ನಿಗಮವು ಎರಡನೇ ಹಂತದ ಮಾರ್ಗವನ್ನು ಈಗಾಗಲೇ ಅಂತಿಮಗೊಳಿಸಿದ್ದು, ರೈಟ್ಸ್ ಎಂಬ ಸಂಸ್ಥೆ ಮೂಲಕ ಸರ್ವೇಕ್ಷಣಾ ಕಾರ್ಯ ನಡೆಸಲಾಗಿದೆ. ಆದರೂ, ಅಧಿಕಾರಿಗಳು ಸಮೀಕ್ಷೆ ಕಾರ್ಯ ಮುಗಿದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವೇದಿಕೆ ಆಕ್ಷೇಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.