ADVERTISEMENT

₹2 ಕೋಟಿ ಮೌಲ್ಯದ ಚಿನ್ನ ಜಪ್ತಿ

ಅಕ್ರಮ ಚಿನ್ನ ಸಾಗಣೆ ಜಾಲ ಪತ್ತೆ * ಕಸ್ಟಮ್ಸ್‌ ಅಧಿಕಾರಿಗಳಿಂದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
₹2 ಕೋಟಿ ಮೌಲ್ಯದ ಚಿನ್ನ ಜಪ್ತಿ
₹2 ಕೋಟಿ ಮೌಲ್ಯದ ಚಿನ್ನ ಜಪ್ತಿ   

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಬ್ದುಲ್‌ ರಹಮಾನ್ ಜಾ ರಿಜಿಕ್‌ (38), ಯೂಸೂಫ್ ಹರ್ಜಲ್ಹಾ (32) ಹಾಗೂ ಮುನಿಸ್ವಾಮಿ ಪೊನ್ನಯ್ಯ ಬಂಧಿತರು. ಅವರಿಂದ ₹2 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

‘ದುಬೈನಿಂದ ಎಮಿರೆಟ್ಸ್‌ ಇ.ಕೆ 0564 ವಿಮಾನದಲ್ಲಿ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಆರೋಪಿ ಅಬ್ದುಲ್‌, ಚಿನ್ನದ ಬಿಸ್ಕತ್‌ಗಳ ಸಮೇತ ಹೊರಗೆ ಬಂದಿದ್ದರು. ಅವರ ಚಲನವಲನದಲ್ಲಿ ಅನುಮಾನ ಬಂದು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದರು’ ಎಂದು ಕಸ್ಟಮ್ಸ್‌ ಇಲಾಖೆಯ ಹೆಚ್ಚುವರಿ ಆಯುಕ್ತ ಹರ್ಷವರ್ಧನ್‌ ತಿಳಿಸಿದರು.

ADVERTISEMENT

‘ಚಿನ್ನದ ಬಿಸ್ಕತ್‌ಗಾಗಿ ಯೂಸೂಫ್‌ ಕಾಯುತ್ತಿದ್ದರು. ಅವರನ್ನು ಸಹ ಸಿಬ್ಬಂದಿ ಬಂಧಿಸಿದ್ದಾರೆ. ಇವರಿಬ್ಬರೂ ಹಲವು ವರ್ಷಗಳಿಂದ ಅಕ್ರಮ ಸಾಗಣೆಯಲ್ಲಿ ತೊಡಗಿದ್ದರು ಎಂದು ಗೊತ್ತಾಗಿದೆ. ಅವರಿಂದ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದರು.

‘ಇನ್ನೊಂದು ಪ್ರಕರಣದಲ್ಲಿ ಮಲೇಷ್ಯಾದಿಂದ ಏರ್‌ ಏಷ್ಯಾ ಎ.ಕೆ 053 ವಿಮಾನದಲ್ಲಿ ಬಂದಿಳಿ ದಿದ್ದ ಮುನಿಸ್ವಾಮಿ ಅವರ ಬಳಿಯೂ ಚಿನ್ನ ಸಿಕ್ಕಿತ್ತು. ಅವರು ಚಿನ್ನಕ್ಕೆ ಕಪ್ಪು ಅಂಟಿನ ಪಟ್ಟಿಯನ್ನು ಸುತ್ತಿ ಸಾಗಿಸುತ್ತಿದ್ದರು. ನಿಲ್ದಾಣದಿಂದ ಹೊರಬಂದ ಬಳಿಕ, ಆ ಚಿನ್ನವನ್ನು ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ಅವರು ನೀಡಬೇಕಿತ್ತು. ಅಷ್ಟರಲ್ಲಿ ಬಂಧಿಸಿದೆವು. ಈಗ ಅವರ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಹರ್ಷವರ್ಧನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.