ADVERTISEMENT

2 ಕೋಟಿ ಮೌಲ್ಯದ ವಸ್ತುಗಳ ವಶ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಬೆಂಗಳೂರು: ದರೋಡೆ, ಕಳವು ಮತ್ತಿತರ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ಪೂರ್ವ ವಿಭಾಗದ ಪೊಲೀಸರು ಎರಡೂವರೆ ಕೆ.ಜಿ ಚಿನ್ನಾಭರಣ ಸೇರಿದಂತೆ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ಸಿಬ್ಬಂದಿ ಒಟ್ಟು 130 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ 84 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡೂವರೆ ಕೆ.ಜಿ ಚಿನ್ನಾಭರಣ, ಒಂದೂವರೆ ಕೆ.ಜಿ ಬೆಳ್ಳಿ ವಸ್ತುಗಳು, 21 ಕಾರು ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ~ ಎಂದು ಅಪರಾಧ (ಪೂರ್ವ) ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಕಳವು, ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿರುವ ಮಹದೇವಪುರ ಪೊಲೀಸರು 35.51 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದರು.

ವಂಚನೆ ಪ್ರಕರಣದಲ್ಲಿ ಗೋಪಿಕೃಷ್ಣ, ಕಿಶನ್‌ಪಾಲ್ ಸಿಂಗ್ ಮತ್ತು ಮಂಜುನಾಥ್ ಎಂಬುವರನ್ನು ಬಂಧಿಸಿರುವ ಇಂದಿರಾನಗರ ಪೊಲೀಸರು 2 ಕಾರು ಹಾಗೂ 480 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ಗೋಪಿಕೃಷ್ಣ ಕಡಿಮೆ ಬೆಲೆಗೆ ಚಿನ್ನದ ಬಿಸ್ಕತ್ ಕೊಡಿಸುವುದಾಗಿ ನಂಬಿಸಿ ಪರಿಚಿತ ವ್ಯಕ್ತಿಗಳಿಂದ ಹಣ ಪಡೆದು ವಂಚಿಸಿದ್ದ. ಮತ್ತೊಬ್ಬ ಆರೋಪಿ ಕಿಶನ್‌ಪಾಲ್, `ಖಾಸಗಿ ಕಂಪೆನಿಯ ಸ್ಪರ್ಧೆಯಲ್ಲಿ ನಗದು ಬಹುಮಾನ ಬಂದಿದೆ. ಬಹುಮಾನದ ಹಣ ಪಡೆಯಲು ತೆರಿಗೆ ಪಾವತಿಸಬೇಕು~ ಎಂದು ಸಾರ್ವಜನಿಕರ ಮೊಬೈಲ್‌ಗೆ ಕರೆ ಮಾಡಿ ಬ್ಯಾಂಕ್ ಖಾತೆಯೊಂದರ ವಿವರ ನೀಡುತ್ತಿದ್ದ. ಸಾರ್ವಜನಿಕರು, ಆತ ನೀಡಿದ್ದ ಖಾತೆಗಳಿಗೆ ಹಣ ಸಂದಾಯ ಮಾಡಿ ವಂಚನೆಗೊಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್.ಪುರ ಪೊಲೀಸರು ಲ್ಯಾಪ್‌ಟಾಪ್ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಲಕ್ಷ್ಮಣರಾಮ್ (28) ಮತ್ತು ಸರವಣಕುಮಾರ್ (22) ಎಂಬುವರನ್ನು ಬಂಧಿಸಿ ಎಂಟು ಲ್ಯಾಪ್‌ಟಾಪ್ ಜಪ್ತಿ ಮಾಡಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಎಂ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಎಸಿಪಿಗಳಾದ ಡಾ.ಡಿ.ನಾರಾಯಣಸ್ವಾಮಿ, ಶಿವಮೂರ್ತಿ, ಇನ್‌ಸ್ಪೆಕ್ಟರ್‌ಗಳಾದ ಟಿ. ರಂಗಪ್ಪ, ವಿ.ಕೆ.ವಾಸುದೇವ, ಎಚ್.ಕೆ.ಮಹಾನಂದ, ಕೆ. ಎಸ್.ನಾಗರಾಜ್, ಕಿಶೋರ್ ಭರಣಿ, ಕೆ.ಎಸ್.ವೆಂಕಟೇಶನಾಯ್ಡು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.