ADVERTISEMENT

ಬೆಂಗಳೂರು: ಬಿಡಿಎ ಎಂಜಿನಿಯರ್‌, ಭೂಮಾಪಕನ ಬಂಧಿಸಿದ ಎಸಿಬಿ

ಮನೆ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ₹ 2 ಲಕ್ಷ ಲಂಚ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:29 IST
Last Updated 25 ಅಕ್ಟೋಬರ್ 2021, 14:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಎಚ್‌ಬಿಆರ್‌ ಬಡಾವಣೆಯಲ್ಲಿ ಹಳೆಯ ಮನೆ ಕೆಡವಿ, ಹೊಸ ಮನೆ ನಿರ್ಮಿಸಲು ನಿರಾಕ್ಷೇಪಣಾ ಪತ್ರ ನೀಡಲು ₹ 2 ಲಕ್ಷ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉತ್ತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್‌ ಮತ್ತು ಭೂಮಾಪಕ ಜಯರಾಂ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ.

ಕಲ್ಯಾಣನಗರದ ಕಾಚರಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 21/2ರಲ್ಲಿ ಮರಿಯಪ್ಪ ಎಂಬುವವರು ನಿವೇಶನ (ಆಸ್ತಿ ಸಂಖ್ಯೆ 1861) ಹೊಂದಿದ್ದರು. ಅಲ್ಲಿದ್ದ ಹಳೆಯ ಮನೆ ಕೆಡವಿದ್ದು, ಹೊಸ ಮನೆ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಿದ್ದರು. ಬಿಬಿಎಂಪಿಯಿಂದ ನಕ್ಷೆ ಅನುಮೋದನೆ ಹಾಗೂ ನಿರಾಕ್ಷೇಪಣಾ ಪತ್ರವನ್ನೂ ಪಡೆದಿದ್ದರು. ಬಿಡಿಎ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಸ್ಥಳಕ್ಕೆ ಭೇಟಿನೀಡಿದ್ದ ಎಇಇ ಮತ್ತು ಭೂಮಾಪಕ, ಈ ಆಸ್ತಿ ಬಿಡಿಎ ಭೂಸ್ವಾಧೀನ ಪ್ರಕ್ರಿಯೆಯ ವ್ಯಾಪ್ತಿಯಲ್ಲಿದೆ ಎಂಬ ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದ್ದರು. ಬಳಿಕ ಜಯರಾಂ ಅವರನ್ನು ಸಂಪರ್ಕಿಸುವಂತೆ ಮಂಜುನಾಥ್‌ ಅರ್ಜಿದಾರರಿಗೆ ಸೂಚಿಸಿದ್ದರು. ಮರಿಯಪ್ಪ ಅವರ ಅಳಿಯ ರಘು ಲಕ್ಷ್ಮೀನಾರಾಯಣ್‌ ಭೂಮಾಪಕನನ್ನು ಭೇಟಿಯಾದಾಗ, ನಿರಾಕ್ಷೇಪಣಾ ಪತ್ರ ನೀಡಲು ₹ 5 ಲಕ್ಷ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ADVERTISEMENT

ಚೌಕಾಸಿ ಮಾಡಿದಾಗ, ₹ 4 ಲಕ್ಷ ಕೊಟ್ಟರೆ ಎನ್‌ಒಸಿ ನೀಡುವುದಾಗಿ ಒಪ್ಪಿಕೊಂಡಿದ್ದರು. ಸೋಮವಾರ ಮತ್ತು ಮುಂದಿನ ಸೋಮವಾರ ತಲಾ ₹ 2 ಲಕ್ಷ ತಲುಪಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು. ಸೋಮವಾರ ಮಧ್ಯಾಹ್ನ ಎಚ್‌ಬಿಆರ್‌ ಬಿಡಿಎ ಸಂಕೀರ್ಣಕ್ಕೆ ಹೋದ ರಘು, ಜಯರಾಂ ಅವರಿಗೆ ₹ 2 ಲಕ್ಷ ನೀಡಿದರು. ತಕ್ಷಣ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿತು.

ತೆರವು ಕಾರ್ಯಾಚರಣೆಯಲ್ಲಿದ್ದ ಎಇಇ: ಮಂಜುನಾಥ್‌ ಅವರು ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಗುರುತಿಸಿರುವ ಸೋಮಶೆಟ್ಟಿಹಳ್ಳಿಯಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿದ್ದರು. ಲಂಚದ ಹಣ ಪಡೆದ ಜಯರಾಂ, ಎಇಇಗೆ ಕರೆಮಾಡಿ ‘ನಗದು ತಲುಪಿದೆ, ಪಡೆದುಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದ್ದರು.

ಸೋಮಶೆಟ್ಟಿಹಳ್ಳಿಗೆ ತೆರಳಿದ ಎಸಿಬಿ ಅಧಿಕಾರಿಗಳ ಮತ್ತೊಂದು ತಂಡ ಮಂಜುನಾಥ್‌ ಅವರನ್ನು ಬಂಧಿಸಿತು. ಬಳಿಕ ಕರೆತಂದು ಅವರ ಕಚೇರಿಯ ಪರಿಶೀಲನೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಎಇಇ ಕಚೇರಿಯಲ್ಲಿ ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯಲ್ಲೂ ಶೋಧ: ನಾಗರಭಾವಿಯಲ್ಲಿರುವ ಮಂಜುನಾಥ್‌ ಮನೆ ಮೇಲೆ ದಾಳಿಮಾಡಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ.

ಮರಿಯಪ್ಪ ಹೆಸರಿನಲ್ಲಿರುವ ನಿವೇಶನವೂ ಸೇರಿದಂತೆ ಆ ಪ್ರದೇಶದಲ್ಲಿನ ಹಲವು ಸ್ವತ್ತುಗಳನ್ನು ಬಿಡಿಎ ಸ್ವಾಧೀನಕ್ಕೆ ಪಡೆದಿರಲಿಲ್ಲ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಯಾವುದೇ ಪ್ರಕ್ರಿಯೆಯೂ ನಡೆದಿಲ್ಲ. ಹಲವು ವರ್ಷಗಳಿಂದಲೂ ಅಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿತ್ತು ಎಂಬುದು ಪರಿಶೀಲನೆ ವೇಳೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.