ADVERTISEMENT

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 20 ಮನೆ: ವಸತಿ ಸಚಿವ ವಿ.ಸೋಮಣ್ಣ

ರಾಜೀವ್‌ಗಾಂಧಿ ನಿಗಮದಿಂದ 1.56 ಲಕ್ಷ ಮನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 4:05 IST
Last Updated 5 ಸೆಪ್ಟೆಂಬರ್ 2020, 4:05 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಬಡವರಿಗಾಗಿ ತಲಾ 20 ಮನೆಗಳನ್ನು ನಿರ್ಮಿಸಿ ಕೊಡಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಇದಲ್ಲದೆ, ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ 1.56 ಲಕ್ಷ ಮನೆಗಳನ್ನು ಬಡವರಿಗಾಗಿ ನಿರ್ಮಿಸಿಕೊಡಲಾಗುವುದು ಎಂದು ಅವರುಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ 188 ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ 16ರೊಳಗೆ 97,134 ಮನೆಗಳ ನಿರ್ಮಾಣದ ಕಾಮಗಾರಿ
ಯನ್ನು ಪ್ರಾರಂಭಿಸಲಾಗುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ 1.80 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುದಾನ ನೀಡಿ ನಾಲ್ಕು ವರ್ಷಗಳು ಕಳೆದಿವೆ. ಈಗ 34,900 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸುವುದಾಗಿ ಅವರು ತಿಳಿಸಿದರು.

ADVERTISEMENT

ರಾಜ್ಯದ 1,700ಕ್ಕೂ ಹೆಚ್ಚು ಕೊಳೆಗೇರಿಗಳಲ್ಲಿ 3.12 ಲಕ್ಷ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ. ಅಲ್ಲದೆ, ಏಳು ಸಾವಿರ ಎಕರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಇದರಿಂದ 3.16 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಕ್ಯಾಬಿನೆಟ್‌ಗಿಂತ ನೀವು ದೊಡ್ಡವರಾ?

‘ಸರ್ಕಾರ ಬಡವರಿಗೆ ಮನೆ ಕಟ್ಟಿಕೊಡಲು ತೀರ್ಮಾನಿಸಿದರೆ. ನೀವು ಅವುಗಳಿಗೆ ತಡೆ ಹಾಕಿಕೊಂಡು ಕೂರಬಾರದು. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡರೂ ಕಡತಗಳು ಮುಂದಕ್ಕೆ ಹೋಗುತ್ತಿಲ್ಲ. ನೀವು ಕ್ಯಾಬಿನೆಟ್‌ಗಿಂತಲೂ ದೊಡ್ಡವರೇ’ ಎಂದು ಸೋಮಣ್ಣ ಸಭೆಯಲ್ಲಿ ಪ್ರಶ್ನಿಸಿದರು.

‘ಬಡವರಿಗೆ ಮನೆ ಕಟ್ಟಿಸಿಕೊಡುವ ವಿಚಾರದಲ್ಲಿ ಯಾರೂ ಅಡ್ಡಿ ಮಾಡಬಾರದು. ಒಂದು ವೇಳೆ ಅಡ್ಡಿ ಮಾಡಿದರೆ, ನಾವೇನು ಮಾಡಬೇಕೋ ಅದನ್ನೇ ಮಾಡುತ್ತೇವೆ. ನಿಮಗೆ ಸಮಸ್ಯೆ ಎನಿಸಿದರೆ ನಿಮ್ಮ ದಾರಿ ನೀವು ನೋಡಿಕೊಳ್ಳಬಹುದು. ನಾನು ಇಲ್ಲಿ ಕೆಲಸ ಮಾಡಲು ಬಂದಿದ್ದೇನೆ ಅಷ್ಟೇ. ಸರ್ಕಾರ ಹಾಕಿಕೊಂಡ ಗುರಿಯನ್ನು ತಲುಪಬೇಕು. ಯಾವುದೇ ಕಾರಣಕ್ಕೂ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡುವುದರಲ್ಲಿ ತಡ ಆಗಬಾರದು’ ಎಂದು ಅವರು ಖಡಕ್ಕಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.