ADVERTISEMENT

2030ಕ್ಕೆ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಶೇ. 2,313ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಆಶಿಷ್‌ ವರ್ಮಾ ಅವರು (ಮಧ್ಯ) ವರದಿ ಕುರಿತು ನಗರ ಭೂ ಸಾರಿಗೆ ನಿರ್ದೇಶನಾಲಯದ ತಾಂತ್ರಿಕ ಮುಖ್ಯಸ್ಥ ಸಮಂತ್ ಪಿ.ಕುಚನಗಿ ಮತ್ತು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್‌.ವಿಶ್ವನಾಥ್‌ ಅವರಿಗೆ ವಿವರಿಸಿದರು -ಪ್ರಜಾವಾಣಿ ಚಿತ್ರ
ಆಶಿಷ್‌ ವರ್ಮಾ ಅವರು (ಮಧ್ಯ) ವರದಿ ಕುರಿತು ನಗರ ಭೂ ಸಾರಿಗೆ ನಿರ್ದೇಶನಾಲಯದ ತಾಂತ್ರಿಕ ಮುಖ್ಯಸ್ಥ ಸಮಂತ್ ಪಿ.ಕುಚನಗಿ ಮತ್ತು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್‌.ವಿಶ್ವನಾಥ್‌ ಅವರಿಗೆ ವಿವರಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಧಾನಿಯಲ್ಲಿ 2030ರ ವೇಳೆಗೆ ವಾಹನಗಳಿಂದ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಶೇ 2,313ರಷ್ಟು ಹೆಚ್ಚಾಗಲಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಾರಿಗೆ ಎಂಜಿನಿಯರಿಂಗ್‌ ಪ್ರಯೋಗಾಲಯವು ಇಂಡೊ–ನಾರ್ವೆ ಯೋಜನೆ
ಯಡಿ ನಡೆಸಿರುವ ‘ಬೆಂಗಳೂರಿಗಾಗಿ ಸುಸ್ಥಿರ ಸಾರಿಗೆ ಕ್ರಮಗಳು’ ಕುರಿತ ಅಧ್ಯಯನದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿ ಸುಸ್ಥಿರ ಸಾರಿಗೆ ಕ್ರಮಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಅಧ್ಯಯನ ಕೈಗೊಂಡಿದೆ. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಆಶಿಷ್‌ ವರ್ಮಾ, ಹರ್ಷ ವಜ್ಜರಾಪು, ಹೇಮಂತಿನಿ ಅಲ್ಲಿರಾಣಿ ತಂಡವು ಸದ್ಯ ಬೆಂಗಳೂರು ಮಹಾನಗರ ಪ್ರದೇಶದಲ್ಲಿ (ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ) ಅಧ್ಯಯನ ಮಾಡಿದೆ. 2014ರಲ್ಲಿ ಅಧ್ಯಯನ ಆರಂಭಿಸಿ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಿದೆ.

ADVERTISEMENT

ಮಂಗಳವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪ್ರೊ.ಆಶಿಷ್‌ ವರ್ಮಾ ಅವರು ಅಧ್ಯಯನದ ಬಗ್ಗೆ ವಿವರಿಸಿದರು.

ವಾಹನಗಳಿಂದ ಉಂಟಾಗುತ್ತಿರುವ ಪ್ರಮುಖ ಮಾಲಿನ್ಯಕಾರಕಗಳಾದ ಇಂಗಾಲದ ಡೈ ಆಕ್ಸೈಡ್‌ (ಸಿಒ2), ಇಂಗಾಲದ ಮೊನಾಕ್ಸೈಡ್‌ (ಸಿಒ), ಹೈಡ್ರೋಕಾರ್ಬನ್‌ (ಎಚ್‌ಸಿ), ಸಾರಜನಕದ ಆಕ್ಸೈಡ್‌ (ಎನ್‌ಒಎಕ್ಸ್‌) ಹಾಗೂ ಗಾಳಿಯಲ್ಲಿ ತೇಲಾಡುವ ಕಣಗಳ (ಪಿಎಂ) ಪ್ರಮಾಣ 2030 ಹಾಗೂ 2050ರ ವೇಳೆಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಸದ್ಯದ ಸ್ಥಿತಿಯಲ್ಲಿ ಪ್ರತಿ ವರ್ಷ ಸರಾಸರಿ 6.95 ಲಕ್ಷ ಟನ್‌ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಮುಂದುವರಿದರೆ, 2030ಕ್ಕೆ 1.68 ಕೋಟಿ ಟನ್‌ ಹಾಗೂ 2050ಕ್ಕೆ 1.76 ಕೋಟಿ ಟನ್‌ಗೆ ಏರಿಕೆ ಆಗಲಿದೆ ಎಂದು ತಿಳಿಸಿದರು.

ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಸದ್ಯದ ವರ್ಷದಲ್ಲಿ ವಾಹನಗಳು ಸಾಗುವ ದೂರ 3.1 ಕೋಟಿ ಕಿ.ಮೀ. ಇದೆ. ಇದು 2030ಕ್ಕೆ 4.8 ಕೋಟಿ ಕಿ.ಮೀ. ಹಾಗೂ 2050ಕ್ಕೆ 7.2 ಕೋಟಿ ಕಿ.ಮೀ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಒಟ್ಟಾರೆ ಶೇ 60ರಷ್ಟು ಹೆಚ್ಚಳವಾಗಲಿದೆ ಎಂದರು.

ಪ್ರವಾಹದಿಂದಲೂ ವಾಹನ ದಟ್ಟಣೆ: ಬೆಂಗಳೂರು ಮಹಾನಗರ ಪ್ರದೇಶದಲ್ಲಿ 2015ರ ನವೆಂಬರ್‌ 3ರಂದು ನಾಲ್ಕು ಗಂಟೆ 10 ನಿಮಿಷಗಳವರೆಗೆ 266 ಮಿ.ಮೀ. ಮಳೆ ಬಿದ್ದಿತ್ತು. ಇದರಿಂದ ಅನೇಕ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿತ್ತು. ಬಹಳಷ್ಟು ರಸ್ತೆಗಳಲ್ಲಿ 4–5 ಅಡಿ ನೀರು ನಿಂತಿತ್ತು. ಇದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಕಾಂಕ್ರೀಟೀಕರಣ ಹಾಗೂ ಡಾಂಬರೀಕರಣದಿಂದಾಗಿ ಮಳೆ ನೀರು ಇಂಗುತ್ತಿಲ್ಲ. ರಸ್ತೆ ಮೇಲೆ ಬಿದ್ದ ನೀರು ಹರಿದು ತಗ್ಗು ಪ್ರದೇಶಗಳಲ್ಲಿ ಶೇಖರಣೆಯಾಗುತ್ತದೆ. ಇದನ್ನು ತಪ್ಪಿಸಬೇಕಾದರೆ, ನೀರು ಇಂಗುವಂತಹ ರಸ್ತೆಗಳನ್ನು ನಿರ್ಮಿಸಬೇಕು. ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಹ ಉಂಟಾಗುವಂತಹ ಕಡೆಗಳಲ್ಲಿ ಇರುವ ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ಪಾಲ್ಗೊಂಡಿದ್ದರು.

ಸುಸ್ಥಿರ ಸಾರಿಗೆಗೆ ಕೈಗೊಳ್ಳಬೇಕಾದ ಕ್ರಮಗಳು

ವಾಹನ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಬಿಎಂಟಿಸಿ, ಮೆಟ್ರೊ ರೈಲು ಸೇರಿದಂತೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಬೈಕ್‌ ಹಾಗೂ ಕಾರುಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ನಿಲುಗಡೆ ಮಾಡಿ ಅಲ್ಲಿಂದ ಸಮೂಹ ಸಾರಿಗೆಯಲ್ಲಿ ತೆರಳುವಂತಹ ‘ಪಾರ್ಕ್‌ ಆ್ಯಂಡ್‌ ರೈಡ್‌’ ವ್ಯವಸ್ಥೆ ಅಸ್ತಿತ್ವಕ್ಕೆ ಬರಬೇಕು. ಕಾರ್‌ಪೂಲಿಂಗ್‌ಗೆ ಪ್ರೋತ್ಸಾಹ ನೀಡಬೇಕು. ಉತ್ತಮ ಪಾದಚಾರಿ ಮಾರ್ಗ ಹಾಗೂ ಸೈಕಲ್‌ ಪಥಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಶಿಷ್‌ ವರ್ಮಾ ಸಲಹೆ ನೀಡಿದರು.

ಕೆಲ ರಸ್ತೆಗಳನ್ನು ನಿರ್ಬಂಧಿತ ಪ್ರದೇಶಗಳನ್ನಾಗಿ ಮಾಡಬೇಕು. ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಮಾಲೀಕರಿಂದ ಶುಲ್ಕ ವಸೂಲಿ ಮಾಡಬೇಕು. ಕಾರುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು. ಇದರಿಂದ ಕಾರುಗಳ ಮಾರಾಟ ಪ್ರಮಾಣ ಕಡಿಮೆ ಆಗುತ್ತದೆ. ಪ್ರತ್ಯೇಕ ಬಸ್‌ ಪಥ ನಿರ್ಮಿಸುವುದು ಹಾಗೂ ಸಿಗ್ನಲ್‌ಗಳಲ್ಲಿ ಬಸ್‌ಗಳ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದರು.

ನಗರದಲ್ಲಿರುವ ಎಲ್ಲ ಬಸ್‌, ಕಾರು, ದ್ವಿಚಕ್ರ ವಾಹನ ಹಾಗೂ ಆಟೊಗಳು ವಿದ್ಯುತ್‌ಚಾಲಿತಗೊಂಡರೆ, ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯದ ಪ್ರಮಾಣವನ್ನು ಶೇ 70ರಷ್ಟು ಕಡಿಮೆ ಮಾಡಬಹುದು. ಇಂಗಾಲದ ಡೈ ಆಕ್ಸೈಡ್‌ ಪ್ರಮಾಣವನ್ನು ಶೇ 98ರಷ್ಟು ಕಡಿಮೆ ಮಾಡಬಹುದು. ಆದರೆ, ಆ ವಾಹನಗಳಿಗೆ ಪೂರೈಸುವ ವಿದ್ಯುತ್‌ ಜಲಜನಕ, ಸೌರಶಕ್ತಿ ಹಾಗೂ ಪವನಶಕ್ತಿಯಿಂದ ಪಡೆದದ್ದು ಆಗಿರಬೇಕು. ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ಕಲ್ಲಿದ್ದಲನ್ನು ಬಳಸುವುದರಿಂದ ಹೊಗೆ ಉತ್ಪತ್ತಿಯಾಗಿ ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ, ಈ ಕೇಂದ್ರದಿಂದ ಪಡೆದ ವಿದ್ಯುತ್‌ ಅನ್ನು ವಾಹನಗಳಿಗೆ ಬಳಸಬಾರದು ಎಂದು ಆಶಿಷ್‌ ವರ್ಮಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.