ADVERTISEMENT

23ರಂದು ಅರ್ಚಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:27 IST
Last Updated 17 ಜುಲೈ 2013, 19:27 IST

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಿಂದ ನೀಡುವ ರೂ24 ಸಾವಿರ ಸ್ವಸ್ತಿಕ್ ಮೊತ್ತವನ್ನು ವರ್ಷದಲ್ಲಿ ಒಂದು ಬಾರಿ ನೇರವಾಗಿ ಅರ್ಚಕರ ಖಾತೆಗೆ ಜಮಾ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘದ ಸದಸ್ಯರು ಇದೇ 23ರಂದು ಪ್ರತಿಭಟನೆ ನಡೆಸಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀವತ್ಸ, ರಾಜ್ಯ ಮಟ್ಟದಲ್ಲಿ ನಡೆಯಲಿರುವ ಈ ಪ್ರತಿಭಟನೆ ಮಧ್ಯಾಹ್ನ 12 ಗಂಟೆಗೆ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಪ್ರಾರಂಭವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆಗೊಳ್ಳಲಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚಿನ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. 

ರಾಜ್ಯದಲ್ಲಿರುವ 376 ದೇವಾಲಯಗಳಿಗೆ `ಎ' ಮತ್ತು `ಬಿ' ದರ್ಜೆಯ ಹುದ್ದೆಗಳಿಗೆ 1296 ಸಿಬ್ಬಂದಿಗಳನ್ನು ನೇಮಕ ಮಾಡಿ, ದೇವಾಲಯಗಳ ಹಣದಲ್ಲಿ ಅವರಿಗೆ ವೇತನ ನೀಡಲು ನಿರ್ಧರಿಸಿರುವುದು ಸರಿಯಿಲ್ಲ. ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಕೇವಲ ರೂ 3 ಸಾವಿರ ವೇತನ ನೀಡುವ ಸರ್ಕಾರ ಅರ್ಚಕರು ಹಾಗೂ ನೌಕರರ ವೇತನವನ್ನು ರೂ 11 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. 

2003-12ರವರೆಗೆ ನಡೆದಿರುವ ಆಗಮಿಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಇಲಾಖೆಯ ಉಪ ಆಯುಕ್ತರ ತನಿಖೆಯಿಂದ ಧೃಡಪಟ್ಟಿದ್ದು, ಇದಕ್ಕೆ ಕಾರಣರಾದವರನ್ನು ಅಮಾನತ್ತು ಮಾಡಬೇಕು. ಜೊತೆಗೆ ತನಿಖೆಯನ್ನು ಮುಂದುವರೆಸಿಬೇಕು ಎಂದು ಒತ್ತಾಯಿಸಿದರು.

ಮುಜರಾಯಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಗ್ರಾಮೀಣ ಪ್ರದೇಶಗಳಲ್ಲಿನ `ಸಿ' ವರ್ಗದ ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರ ಮಕ್ಕಳಿಗೆ ಶೇಕಡ 50 ರಷ್ಟು ಮೀಸಲಾತಿ ನೀಡಬೇಕು. `ಸಿ' ವರ್ಗದ ದೇವಾಲಯಗಳ ವ್ಯವಸ್ಥಾಪಕ ಸಮಿತಿಯನ್ನು ರದ್ದುಪಡಿಸಿ, ಧರ್ಮದರ್ಶಿಗಳ ಸಮಿತಿ ರಚಿಸಬೇಕು ಎಂದು ತಿಳಿಸಿದರು.

ರಾಜ್ಯದ ಅರ್ಚಕರು ಹಾಗೂ ಆಗಮಿಕರನ್ನು ನಿರ್ಲಕ್ಷಿಸಿ, ವಿದೇಶಗಳಲ್ಲಿರುವ ಅರ್ಚಕರು ಮತ್ತು ಆಗಮಿಕರಿಗೆ ಪುರಸ್ಕಾರ ನೀಡುವ ಪದ್ದತಿಯನ್ನು ಕೈ ಬಿಡಬೇಕು. ಮುಜರಾಯಿ ಇಲಾಖೆಯನ್ನು ಕಂದಾಯ ಇಲಾಖೆಯಿಂದ ಬೇರ್ಪಡಿಸಿ, ಪ್ರತ್ಯೇಕ ಇಲಾಖೆಯನ್ನಾಗಿ ರಚಿಸಬೇಕು ಎಂದು ಹೇಳಿದರು.

ಹಿಂದೆ ಇದ್ದಂತೆ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಲಹಾ ಸಮಿತಿಯನ್ನು ಪುನಃ ರಚಿಸುವುದು, ಮುಜರಾಯಿ ಇಲಾಖೆಯ ಎಲ್ಲಾ `ಸಿ' ವರ್ಗದ  ದೇವಾಲಯಗಳ ಹೆಸರಿಗೆ ಬಿಪಿಎಲ್ ಪಡಿತರ ಚೀಟಿ ನೀಡುವುದು ಹಾಗೂ  `ಸಿ' ವರ್ಗದ ದೇವಾಲಯಗಳ ಅರ್ಚಕರಿಗೆ ಯಶಸ್ವಿನಿ ಕಾರ್ಡ್ ವಿತರಿಸಬೇಕು ಎಂದು ಆಗ್ರಹಿಸಿದರು. 

ಇಡೀ ದಿನ ಪೂಜಾ ಕಾರ್ಯ ನೆರವೇರಿಸಲು ವರ್ಷಕ್ಕೆ ರೂ 1.70 ಲಕ್ಷ ವೆಚ್ಚವಾಗುತ್ತದೆ. ಆದರೆ ಸರ್ಕಾರದಿಂದ ಕೇವಲ ರೂ 24 ಸಾವಿರ ಮಾತ್ರ ದೊರೆಯುತ್ತದೆ. ಈ ಇದರಿಂದ ಅರ್ಚಕರಿಗೆ ವರ್ಷವಿಡೀ ಈ ಮೊತ್ತದಲ್ಲಿ ಪೂಜಾ ಕಾರ್ಯ ನೆರವೇರಿಸುವುದು ಕಷ್ಟವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.