ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2,320 ಪೇಯಿಂಗ್ ಗೆಸ್ಟ್‌ಗಳು (ಪಿ.ಜಿ) ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಎಲ್ಲವನ್ನೂ ಮುಚ್ಚಲು ನೋಟಿಸ್ ಜಾರಿ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಪಿ.ಜಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪಾಲಿಕೆಯ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆಯದೆ, ಮಾರ್ಗಸೂಚಿಗಳನ್ನು ಪಾಲಿಸದೆ ಕಾರ್ಯಾಚರಣೆ ಮಾಡುತ್ತಿದ್ದ ಪಿ.ಜಿಗಳಿಗೆ ಮೂರು ನೋಟಿಸ್ ನೀಡಲಾಗಿತ್ತು. ಯಾವುದೇ ಕ್ರಮ ಕೈಗೊಳ್ಳದ್ದರಿಂದ, ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಮತ್ತು 308ರಡಿಯಲ್ಲಿ ಮುಚ್ಚುವ ಕಾರ್ಯ ಮಾಡಲಾಗುತ್ತಿದೆ. ಅದರಂತೆ ಒಂದು ಅಧಿಕೃತ ಪಿ.ಜಿ ಹಾಗೂ 20 ಅನಧಿಕೃತ ಸೇರಿ 21 ಪಿ.ಜಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,193 ಅಧಿಕೃತ ಪಿ.ಜಿಗಳಿವೆ. 1,578 ಪಿ.ಜಿಗಳು ಮಾರ್ಗಸೂಚಿಗಳನ್ನು ಪಾಲಿಸುತ್ತಿವೆ. ಒಟ್ಟು 856 ಪಿ.ಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. 615 ಪಿ.ಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ದಾಸರಹಳ್ಳಿ ವಲಯ ಒಂದು ಪಿ.ಜಿಯನ್ನು ಮುಚ್ಚಲಾಗಿದೆ.
ನಗರದಲ್ಲಿ ಒಟ್ಟು 2,320 ಅನಧಿಕೃತ ಪಿ.ಜಿಗಳಿದ್ದು, ಅದರಲ್ಲಿ 1,674 ಪಿ.ಜಿಗಳು ಮಾರ್ಗಸೂಚಿಗಳನ್ನು ಪಾಲಿಸುತ್ತಿವೆ. 646 ಪಿ.ಜಿಗಳು ಮಾರ್ಗಸೂಚಿಗಳನ್ನೂ ಪಾಲಿಸುತ್ತಿಲ್ಲ. ಎಲ್ಲ 2,320 ಪಿ.ಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಹದೇವಪುರ ವಲಯದಲ್ಲಿ ಒಂಬತ್ತು, ದಕ್ಷಿಣ ಹಾಗೂ ದಾಸರಹಳ್ಳಿ ವಲಯದಲ್ಲಿ ತಲಾ ನಾಲ್ಕು, ಯಲಹಂಕ ವಲಯದಲ್ಲಿ ಮೂರು ಸೇರಿದಂತೆ ಒಟ್ಟು 20 ಪಿ.ಜಿಗಳನ್ನು ಈವರೆಗೆ ಮುಚ್ಚಲಾಗಿದೆ ಎಂದು ವಿಕಾಸ್ ತಿಳಿಸಿದ್ದಾರೆ.
* ಪಿ.ಜಿಗಳ ಎಲ್ಲ ಪ್ರವೇಶ/ ನಿರ್ಗಮನ ದ್ವಾರ ಮತ್ತು ಆವರಣದ ಸುತ್ತಮುತ್ತ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು. 30 ದಿನಗಳವರೆಗೆ ಬ್ಯಾಕ್‌ಅಪ್ ಹೊಂದಿರಬೇಕು.
* ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ ಪಿ.ಜಿಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ 70 ಚದರ ಅಡಿ ಕನಿಷ್ಠ ಜಾಗವಿರಬೇಕು. ಕಟ್ಟಡದಲ್ಲಿ ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿ ನೀಡಬೇಕು.
* ಪಿ.ಜಿಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೌಲಭ್ಯವಿರಬೇಕು.
* ಪಿ.ಜಿಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರಬೇಕು. ಪ್ರತಿಯೊಬ್ಬ ವಾಸಿಗೆ ಪ್ರತಿ ದಿನ 135 ಲೀಟರ್ ನೀರಿನ ಲಭ್ಯತೆ ಇರುವುದನ್ನು ಮಾಲೀಕರು/ ಉದ್ದಿಮೆದಾರರು ಖಾತರಿಪಡಿಸಬೇಕು.
* ಪಿ.ಜಿಗಳಲ್ಲಿ ಉದ್ದಿಮೆದಾರರು ತಮ್ಮದೇ ಅಡುಗೆ ಮನೆ ಹೊಂದಿದ್ದಲ್ಲಿ ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ ಮೂರು ತಿಂಗಳೊಳಗೆ ಕಡ್ಡಾಯವಾಗಿ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆದುಕೊಳ್ಳಬೇಕು.
* ಪಿ.ಜಿ ನಿವಾಸಿಗಳ ಸುರಕ್ಷತೆಗೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು 24 ಗಂಟೆಯೂ ನಿಯೋಜಿಸಿರಬೇಕು.
* ಪಿ.ಜಿಗಳು ವಾಣಿಜ್ಯ ಪರವಾನಗಿ ಪತ್ರ ಪಡೆಯುವಾಗ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಬೇಕು
* ಪಿ.ಜಿ ಕಟ್ಟಡದಲ್ಲಿ ಬಿಬಿಎಂಪಿ ಸಹಾಯವಾಣಿ- 1533 ಪೊಲೀಸ್ ಇಲಾಖೆಯ ಸಹಾಯವಾಣಿ 101 ಫಲಕವನ್ನು ಪ್ರದರ್ಶಿಸಿರಬೇಕು.
* ಪಿ.ಜಿಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಿರಬೇಕು.
* ಪಿ.ಜಿಗಳ ಮಾಲೀಕರು ಘನತ್ಯಾಜ್ಯ ವಿಂಗಡಿಸಿ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.