ADVERTISEMENT

ಹೂಡಿಕೆ ಹೆಸರಲ್ಲಿ ₹ 2.24 ಕೋಟಿ ವಂಚನೆ

ಹೆಚ್ಚಿನ ಲಾಭಾಂಶ ಕೊಡುವ ಆಮಿಷ l ತಲೆ ಮರೆಸಿಕೊಂಡ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿ‌ದರೆ ಹೆಚ್ಚಿನ ಲಾಭಾಂಶ ಕೊಡುವ ಆಮಿಷ ಒಡ್ಡಿ ₹ 2.24 ಕೋಟಿ ಪಡೆದು ವಂಚಿಸಿದ ಪ್ರಕರಣ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ವಂಚನೆಗೆ ಒಳಗಾದ ಆರ್‌.ಎಂ.ವಿ. ಎರಡನೇ ಹಂತದ ನಿವಾಸಿ ರಿಷಿ ಕಾರ್ಯಪ್ಪ ಎಂಬುವವರು ರಾಜರಾಜೇಶ್ವರಿ ನಗರ ನಿವಾಸಿಗಳಾದ ಪ್ರೀತಿ, ಆಕೆಯ ಪತಿ ಸುನೀಲ್‌ ಠಕ್ಕರ್‌, ಆನಂದ್‌ ಮತ್ತು ಶರವಣ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

‘ಕಾಲೇಜು ಸ್ನೇಹಿತನ ಮೂಲಕ 2015ರಲ್ಲಿ ನನಗೆ ಪ್ರೀತಿ ಅವರ ಪರಿಚಯವಾಗಿತ್ತು. ಗಾಂಧಿನಗರದಲ್ಲಿದ್ದ ಅವರ ಕಚೇರಿಯಲ್ಲಿ ಮೊದಲ ಬಾರಿಗೆ ನಾನು ಅವರನ್ನು ಭೇಟಿ ಮಾಡಿದ್ದೆ. ಈ ಸಂದರ್ಭದಲ್ಲಿ ಕಚೇರಿಯಲ್ಲಿ ಅವರ ಪತಿ ಮತ್ತು ಸಿಬ್ಬಂದಿ ಇದ್ದರು. ತಮ್ಮ ಯಶ್‌ ಇನ್ವೆಸ್ಟ್‌ಮೆಂಟ್‌ ಕನ್ಸಲ್ಟೆಂಟ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರಕಿಸಿ ಕೊಡುವುದಾಗಿ ನಂಬಿಸಿದ್ದರು’ ಎಂದು ದೂರಿನಲ್ಲಿ ರಿಷಿ ತಿಳಿಸಿದ್ದಾರೆ.

ADVERTISEMENT

‘ಪ್ರೀತಿ– ಸುನೀಲ್‌ ದಂಪತಿಯ ಮಾತು ನಂಬಿ ನಾನು 2015ರ ಆಗಸ್ಟ್‌ನಿಂದ 2016ರ ಫೆಬ್ರುವರಿ ಮಧ್ಯೆ ಈ ಕಂಪನಿಯಲ್ಲಿ ಹಂತ ಹಂತವಾಗಿ ₹ 1.80 ಕೋಟಿ ಹೂಡಿಕೆ ಮಾಡಿದ್ದೇನೆ. ಆ ಬಳಿಕ, ಈ ದಂಪತಿ ಮತ್ತು ಅವರ ಕಚೇರಿಯ ಸಿಬ್ಬಂದಿ ಮೂಲಕ ಮತ್ತೆ ₹ 43 ಲಕ್ಷ, ₹ 75 ಲಕ್ಷ ಮತ್ತು ₹ 30 ಲಕ್ಷ ಹಣವನ್ನು ಪ್ರತ್ಯೇಕವಾಗಿ ನೀಡಿದ್ದೇನೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

‘2016ರ ಏಪ್ರಿಲ್‌ವರೆಗೆ ಕಂತುಗಳಲ್ಲಿ ₹ 60 ಲಕ್ಷವನ್ನು ನನಗೆ ಮರುಪಾವತಿಸಿದ್ದಾರೆ. ಬಳಿಕ ನಾನು ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಒಡ್ಡಿದ್ದಾರೆ. ಇದೇ ಜೂನ್‌ 16ರಂದು ತನ್ನ ಮತ್ತು ಜೊತೆಗಿದ್ದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದರಿಂದ ಪ್ರೀತಿ ನಾಪತ್ತೆಯಾಗಿರುವ ವಿಷಯ ಮಾಧ್ಯಮಗಳ ಮೂಲಕ ತಿಳಿಯಿತು. ನನಗೆ ಒಟ್ಟು ₹ 2.24 ಕೋಟಿ ವಂಚಿಸಿದ ಪ್ರೀತಿ, ಆಕೆಯ ಪತಿ ಹಾಗೂ ಇತರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.