ADVERTISEMENT

25 ಲಕ್ಷ ಲಸಿಕೆ ಸಂಗ್ರಹಕ್ಕೆ ಸೌಕರ್ಯ ಸಜ್ಜು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೋವಿಡ್‌ ನಿಯಂತ್ರಣಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 20:11 IST
Last Updated 25 ನವೆಂಬರ್ 2020, 20:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ 25 ಲಕ್ಷ ಕೋವಿಡ್‌ ಲಸಿಕೆಯನ್ನು ಸಂಗ್ರಹಿಸುವುದಕ್ಕೆ ಅಗತ್ಯವಿರುವ ಮೂಲಸೌಕರ್ಯ ಸಜ್ಜುಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

’ಪಾಲಿಕೆಯಲ್ಲಿ ಐಸ್‌ಲೈನ್‌ಡ್‌ ರೆಫ್ರಿಜರೇಟರ್‌ಗಳು (ಐಎಲ್‌ಆರ್) ಹಾಗೂ ಡೀಪ್‌ ಫ್ರೀಜರ್‌ಗಳು ಸೇರಿ 330 ರೆಫ್ರಿಜರೇಟರ್‌ಗಳು ಲಭ್ಯ ಇವೆ. ಪ್ರತಿ ಐಎಲ್‌ಆರ್‌ನಲ್ಲಿ 50 ಸಾವಿರ ಲಸಿಕೆಗಳನ್ನು ಸಂಗ್ರಹಿಸಬಹುದು. ಇಂತಹ 44 ಈಎಲ್‌ಆರ್‌ಗಳು ಲಭ್ಯವಿದ್ದು, ಇವುಗಳಲ್ಲೇ 22 ಲಕ್ಷ ಲಸಿಕೆಗಳನ್ನು ಸಂಗ್ರಹಿಸಿಡ ಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರದಿಂದ ಲಸಿಕೆಗಳನ್ನು ಹಂತ ಹಂತವಾಗಿ ಹಂಚಿಕೆ ಮಾಡಲಿದೆ. ಹಾಗಾಗಿ, ಲಸಿಕೆ ದಾಸ್ತಾನು ಮಾಡಲು ಈಗಿರುವ ಮೂಲಸೌಕರ್ಯ ಸಾಕಾಗಬಹುದು. ಒಂದು ವೇಳೆ ಸಾಕಾಗದಿದ್ದರೆ, ಇನ್ನಷ್ಟು ಐಎಲ್‌ಆರ್‌ಗಳನ್ನು ಖರೀದಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ.ಜರ್ಮನಿ ಕಂಪನಿ ತಯಾರಿಸಿದ ಐಎಲ್‌ಆರ್‌ಗೆ ತಲಾ ₹ 3.5 ಲಕ್ಷ ದರವಿದೆ. ಲಸಿಕೆ ಸಂಗ್ರಹಕ್ಕೆ ಅಗತ್ಯವಿರುವ ಪರಿಕರಗಳನ್ನು ಕೇಂದ್ರ ಸರ್ಕಾರದ ಅಧೀನದ ಜೆಮ್‌ ಪೋರ್ಟಲ್‌ನಿಂದ ನೇರವಾಗಿ ಖರೀದಿಸಲು ಅವಕಾಶ ಇದೆ’ ಎಂದರು.

ADVERTISEMENT

‘ಇಡೀ ಕೊಠಡಿಯನ್ನೇ ರೆಫ್ರಿಜರೇಟರ್‌ ಆಗಿ ಪರಿವರ್ತಿಸುವ ವಾಕಿಂಗ್‌ ಕೂಲರ್‌ಗಳು ಕೇಂದ್ರದಿಂದ ಮಂಜೂರಾಗಿವೆ. ಪಾಲಿಕೆಗೂ ಒಂದು ವಾಕಿಂಗ್‌ ಕೂಲರ್‌ ಲಭಿಸುವ ನಿರೀಕ್ಷೆ ಇದೆ. ಒಂದು ವೇಳೆ ಸರ್ಕಾರದಿಂದ ವಾಕಿಂಗ್‌ ಕೂಲರ್‌ ಮಂಜೂರಾಗದಿದ್ದರೂ, ಪಾಲಿಕೆ ವತಿಯಿಂದಲೇ ಅದನ್ನು ನಿರ್ಮಿಸಲಿದ್ದೇವೆ. ಅದನ್ನು ಸಜ್ಜುಗೊಳಿಸಲು ₹ 50 ಲಕ್ಷ ವೆಚ್ಚವಾಗ ಲಿದೆ’ ಎಂದು ಅವರು ವಿವರಿಸಿದರು.

‘ಕೋವಿಡ್‌ ಲಸಿಕೆ ನೀಡುವುದಕ್ಕೆ ಶುಶ್ರೂಷಕಿಯರು ಹಾಗೂ ಸಹಾಯಕ ಆರೋಗ್ಯ ಕಾರ್ಯಕರ್ತೆಯರು ಸೇರಿ 500 ಸಿಬ್ಬಂದಿ ಬಿಬಿಎಂಪಿಯಲ್ಲಿ ಲಭ್ಯ ಇದ್ದಾರೆ. ಅಗತ್ಯ ಬಿದ್ದರೆ ವೈದ್ಯಕೀಯ ಪದವಿವ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಇಂಟರ್ನಿಗಳ ನೆರವು ಪಡೆಯಲಿದ್ದೇವೆ’ ಎಂದು ತಿಳಿಸಿದರು.

‘ಬಿಬಿಎಂಪಿಯು 2017ರಲ್ಲಿ ದಡಾರ (ಅಮ್ಮ) ವಿರುದ್ಧ ಸಾಮೂಹಿಕ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಆಗ ಒಂದೇ ಕಂತಿನಲ್ಲಿ 23 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿತ್ತು. ಹಾಗಾಗಿ ಕೋವಿಡ್‌ ಲಸಿಕೆ ನೀಡುವುದು ಕಷ್ಟವಾಗಲಿಕ್ಕಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಮೊದಲ ಹಂತ: 95 ಸಾವಿರ ಮಂದಿಗೆ ಲಸಿಕೆ
‘ಮೊದಲ ಹಂತದಲ್ಲಿ ಯಾರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಅಂತಹ ಒಟ್ಟು 95,011 ಮಂದಿಯನ್ನು ಬಿಬಿಎಂಪಿ ಇದುವರೆಗೆ ಗುರುತಿಸಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಆಯುಕ್ತರು ತಿಳಿಸಿದರು.

ಬಿಬಿಎಂಪಿ: ಮೊದಲ ಹಂತದಲ್ಲಿ ಯಾರಿಗೆ ಲಸಿಕೆ?
ಸರ್ಕಾರಿ ವೈದ್ಯಕೀಯ ಸಿಬ್ಬಂದಿ;
15,072
ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು; 2,884
ಖಾಸಗಿ ವೈದ್ಯಕೀಯ ಸಿಬ್ಬಂದಿ; 12,400
ಖಾಸಗಿ ಅರೆ ವೈದ್ಯಕೀಯ ಮತ್ತು ನರ್ಸಿಂಗ್‌ ಕಾಲೇಜು ಸಿಬ್ಬಂದಿ; 64,555

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.