ADVERTISEMENT

257 ಅಪರಾಧ ಪ್ರಕರಣ: 219 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ಉತ್ತರ ವಿಭಾಗದ ಪೊಲೀಸರು 219 ಜನರನ್ನು ಬಂಧಿಸಿ, ಆರೋಪಿಗಳಿಂದ 3.75 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
`ಒಂದೂವರೆ ತಿಂಗಳಲ್ಲಿ ಉತ್ತರ ವಿಭಾಗದ ಪೊಲೀಸರು ದರೋಡೆ, ವಾಹನಕಳವು, ಸರಕಳವು ಸೇರಿ 257 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದರು.

ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಐದು ಜನರನ್ನು ಬಂಧಿಸಿರುವ ಪೀಣ್ಯ ಠಾಣೆ ಪೊಲೀಸರು, ಆರೋಪಿಗಳಿಂದ 18.4 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ  ಇತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಎಚ್.ಪಿ.ಸಂತೋಷ್ (23), ಎಚ್.ಎ. ಅಭಿಷೇಕ್ (21), ಆರ್.ಎಸ್.ಸಂತೋಷ ಅಲಿಯಾಸ್ ಲೂಸ್ (23), ಪ್ರವೀಣ್‌ಕುಮಾರ್ (22) ಹಾಗೂ ಎಚ್.ಎಸ್.ಸಂತೋಷ್ (22) ಬಂಧಿತರು.
`ಮಾ.7ರ ರಾತ್ರಿ ದ್ವಿಚಕ್ರ ವಾಹನದಲ್ಲಿ ಗೃಹಲಕ್ಷ್ಮಿ ಬಡಾವಣೆ ಬಳಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ತನ್ನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ, ನಗದು, ದ್ವಿಚಕ್ರ ವಾಹನ ಸೇರಿದಂತೆ ರೂ 1.20 ಲಕ್ಷ ಮೌಲ್ಯದ ವಸ್ತಗಳನ್ನು ದರೋಡೆ ಮಾಡಿದ್ದಾರೆ~ ಎಂದು ಲಕ್ಷ್ಮೀನಾರಾಯಣಮೂರ್ತಿ  ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳನ್ನು ಮಾ.11ರಂದು ಬಂಧಿಸಿ ವಿಚಾರಣೆ ನಡೆಸಿದಾಗ `ಮಂಡ್ಯ ಜಿಲ್ಲೆಯ ರಾಷ್ಟೀಯ ಹೆದ್ದಾರಿ48 ರಸ್ತೆಯಲ್ಲಿ ಹೋಗುವ ಲಾರಿಗಳಿಗೆ ಟಾರ್ಚ್ ಬೆಳಕು ತೋರಿಸಿ ವೇಶ್ಯಾವಾಟಿಕೆ ನಡೆಯುತ್ತಿರುವಂತೆ ಚಾಲಕರ ಗಮನ ಸೆಳೆಯುತ್ತಿದ್ದೆವು. ಕೆಳಗೆ ಇಳಿದಾಗ ಚಾಲಕರಿಗೆ ಹೊಡೆದು ಅವರಲ್ಲಿನ ಚಿನ್ನಾಭರಣ, ನಗದು, ವಾಹನ ಹಾಗೂ ಇತರ ವಸ್ತಗಳನ್ನು ದೋಚುತ್ತಿದ್ದೆವು~ ಎಂದು ಆರೋಪಿಗಳು ಒಪ್ಪಿದ್ದಾರೆ. 

 ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರ ನೇತೃತ್ವದಲ್ಲಿ ಯಶವಂತಪುರ ಉಪವಿಭಾಗದ ಎಸಿಪಿ ಎನ್.ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್  ಬಿ.ಎನ್.ಶಾಮಣ್ಣ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.

ಬಂಧಿಸಲು ನೆರವು; ಮಹಿಳೆಗೆ ಸನ್ಮಾನ:ಮಚ್ಚು ಹಿಡಿದು ಕಳ್ಳನನ್ನು ಹೆದರಿಸಿ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಮಹಿಳೆಗೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶಾಲು ಹೊದಿಸಿ ಸನ್ಮಾನಿಸಿದರು.
ಮಂಡ್ಯ ಜಿಲ್ಲೆಯ ಹಳ್ಳಿಕೆರೆ ಗ್ರಾಮದವರಾದ ಜಯಶ್ರೀ ಆ ಸಾಹಸಿ ಮಹಿಳೆ. ನಂದಿನಿ ಲೇಔಟ್, 4ನೆ ಬ್ಲಾಕ್‌ನ 16ನೇ ಮುಖ್ಯ ರಸ್ತೆಯಲ್ಲಿ ಜಯಶ್ರೀ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದಾರೆ. ಅವರ ಕುಟುಂಬದವರು ಮಾ.22ರಂದು ಊರಿಗೆ ಹೋಗಿದ್ದರು.
 
ರಾತ್ರಿ 2 ಗಂಟೆ ಸುಮಾರಿಗೆ ದುಷ್ಕರ್ಮಿಯೊಬ್ಬ ಜಯಶ್ರೀ ಅವರ ಮನೆಯಲ್ಲಿ ಕಳವು ಮಾಡಲು ಮನೆ ಮೇಲೆ ಹತ್ತಿದ್ದ. ಈ ವೇಳೆ ಮಚ್ಚು ಹಿಡಿದು ಹೊರಗೆ ಬಂದ ಜಯಶ್ರೀ ಕೆಳಗೆ ಇಳಿದರೆ ಕೊಲೆ ಮಾಡುವುದಾಗಿ ಕಳ್ಳನಿಗೆ ಬೆದರಿಕೆ ಹಾಕಿದರು. ತಕ್ಷಣ ಮೈಕೊಲೇಔಟ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಕಳವು; ಆರೋಪಿಗಳ ಬಂಧನ: ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ಸೀನಾ ಪೂಡು ಮಂಜ (20), ಚಿನ್ನಪ್ಪಯ್ಯ (19) ನಗರದ ದಾಸರಹಳ್ಳಿ ನಿವಾಸಿ ಕುಮಾರ ಕುಟ್ಟಿ (20) ತುಮಕೂರಿನ ರಮೇಶ (23) ಬಂಧಿತರು. ಅವರಿಂದ 24 ಲಕ್ಷ ರೂಪಾಯಿ ಮೌಲ್ಯದ  900 ಗ್ರಾಂ ಚಿನ್ನಾಭರಣ ಹಾಗೂ 2.25ಲಕ್ಷ ರೂಪಾಯಿ ಮೌಲ್ಯದ ಮೂರು ಕೆ.ಜಿ. ಬೆಳ್ಳಿಯ ಆಭರಣಗಳನ್ನು ವಶಪಡಿಕೊಂಡಿದ್ದಾರೆ.

ವಾಹನ ಕಳವು; ಬಂಧನ: 4 ಚಕ್ರದ ವಾಹನ ಕಳವು ಮಾಡುತ್ತಿದ್ದ 3 ಆರೋಪಿಗಳನ್ನು ಬಂಧಿಸಿರುವ ಆರ್.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಆರೋಪಿಗಳಿಂದ ರೂ 47 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕೆಳದಿ ಗ್ರಾಮದ ನಿವಾಸಿ ಬಸವರಾಜ, ಮಂಡ್ಯ ಜಿಲ್ಲೆಯವರಾದ ಹೇಮಂತ ಕುಮಾರ್ (27) ಹಾಗೂ ಮುತ್ತು (22) ಬಂಧಿತರು. ತಾವರೆಕೆರೆ ಹಾಗೂ ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.