ಹಣ ವಂಚನೆ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀಡುವುದಾಗಿ ಆಮಿಷವೊಡ್ಡಿ ನಗರದ ಟೆಕಿ ದಂಪತಿಗೆ ₹2,66,75,791 ವಂಚನೆ ಮಾಡಿರುವ ಕುರಿತು ಪೂರ್ವ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸುಮಾರು 50 ಬ್ಯಾಂಕ್ ಖಾತೆಗಳಿಗೆ ಹಣ ವರ್ಗವಾಗಿರುವುದನ್ನು ಪತ್ತೆ ಮಾಡಿದ್ದಾರೆ. ಹಂತ ಹಂತವಾಗಿ ₹1.50 ಕೋಟಿ ಹಣ ಜಪ್ತಿ ಮಾಡಿದ್ದು, ನ್ಯಾಯಾಲಯದ ಅನುಮತಿ ಪಡೆದು ದಂಪತಿಗೆ ವಾಪಸ್ ನೀಡಿದ್ದಾರೆ.
ಘಟನೆ ವಿವರ: ‘ನಗರದ ಬಾಣಸವಾಡಿಯಲ್ಲಿ ವಾಸವಿರುವ ದಂಪತಿಗೆ ಲಂಡನ್‌ನಿಂದ ವ್ಯಕ್ತಿಯೊಬ್ಬ ಕರೆ ಮಾಡಿ, ಯುಟ್ಯೂಬ್ನಲ್ಲಿ ವಿಡಿಯೊ ನೋಡಿ ಚಂದಾದಾರರಾದರೆ(ಸಬ್ಸ್ಕ್ರೈಬ್) ಮಾಡಿದರೆ ₹50 ನೀಡುವುದಾಗಿ ಹೇಳಿದ್ದಾನೆ. ಸಬ್ಸ್ಕ್ರೈಬ್ ಮಾಡಿದ್ದ ದಂಪತಿಗೆ ಹಣ ನೀಡಿದ್ದಾನೆ. ನಂತರ ಟೆಲಿಗ್ರಾಂ ಗ್ರೂಪ್ಗೆ ಸೇರಿಸಿ, ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ನೀಡುವುದಾಗಿ ಆಮಿಷವೊಡ್ಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೊದಲಿಗೆ ₹2 ಲಕ್ಷದಿಂದ ₹3 ಲಕ್ಷ ಹೂಡಿಕೆ ಮಾಡಿದವರಿಗೆ ಲಾಭಾಂಶ ನೀಡಿದ್ದನು. ಇದರಿಂದ ಸಂತಸಗೊಂಡ ದಂಪತಿ ಹಂತ ಹಂತವಾಗಿ ₹2,66,75,791 ಹೂಡಿಕೆ ಮಾಡಿದ್ದರು. ಹಣ ವಾಪಸ್ ಪಡೆಯಲು ಪ್ರಯತ್ನಿಸಿದಾಗ ಅವರಿಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಮತ್ತೆ ₹50 ಲಕ್ಷ ಹೂಡಿಕೆ ಮಾಡಲು ಸೂಚಿಸಿದ್ದ. ಅನುಮಾನಗೊಂಡು ದಂಪತಿ ಪೊಲೀಸರಿಗೆ ದೂರು ನೀಡಿದರು’ ಎಂದು ಹೇಳಿದ್ದಾರೆ.
‘ಆರೋಪಿ ಲಂಡನ್ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಉತ್ತರ ಭಾರತದ ಹಲವರ ಬ್ಯಾಂಕ್ ಖಾತೆಗಳನ್ನು ವಂಚನೆ ಜಾಲಕ್ಕೆ ಬಳಕೆ ಮಾಡಿದ್ದಾನೆ. ಅನುಮಾನ ಬರಬಾರದೆಂದು ಷೇರು ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್ಸೈಟ್ ತೆರೆದು ಮಾಹಿತಿ ಸಹ ನೀಡಿದ್ದ. ಸದ್ಯ ಆರೋಪಿ ಯಾರು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.