ADVERTISEMENT

30ರಿಂದ ಜ್ಯೋತಿಷ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 19:37 IST
Last Updated 27 ನವೆಂಬರ್ 2012, 19:37 IST

ಬೆಂಗಳೂರು: `ನಾಲ್ಕನೇ ಅಂತರರಾಷ್ಟ್ರೀಯ ಜ್ಯೋತಿಷ ಸಮ್ಮೇಳನವನ್ನು ನ.30 ರಿಂದ ಮೂರು ದಿನಗಳ ಕಾಲ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಲಾಗಿದೆ' ಎಂದು ದಿವ್ಯಜ್ಯೋತಿ ಕಾಲೇಜ್ ಆಫ್ ಅಸ್ಟ್ರಾಲಜಿಯ ಸಲಹೆಗಾರ ಡಾ.ಟಿ.ಎಸ್. ವಾಸನ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ವೈವಾಹಿಕ ಸಂಬಂಧಗಳ ಮೇಲೆ ಜ್ಯೋತಿಷದ ಪ್ರಭಾವ' ಎಂಬುದು ಸಮ್ಮೇಳನದ ಚರ್ಚೆಯ ವಿಷಯವಾಗಲಿದೆ. ಸಮ್ಮೇಳನವನ್ನು ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದು, ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಉಪಮುಖ್ಯಮಂತ್ರಿ ಆರ್.ಅಶೋಕ, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗವಹಿಸಲಿದ್ದಾರೆ' ಎಂದರು.

`ಇಂದು ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಜ್ಯೋತಿಷಿಗಳು ಬೇಕು. ಆದರೆ, ಮುಖ್ಯವಾಹಿನಿಯಲ್ಲಿ ಅವರನ್ನು ಸೇರಿಸಿಕೊಳ್ಳಲಾಗುತ್ತಿಲ್ಲ. ಮುಖ್ಯವಾಗಿ ಜ್ಯೋತಿಷವನ್ನು ವಿಶ್ವವಿದ್ಯಾಲಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್, ಪದವಿ, ಸ್ನಾತಕೋತ್ತರ ಪದವಿಗಳಂತೆ ವ್ಯಾಸಂಗ ಕ್ರಮವಾಗಿ ಬೋಧಿಸುವ ವ್ಯವಸ್ಥೆ ಬರಬೇಕು ಎಂಬ ಬೇಡಿಕೆಯು ಬೇಡಿಕೆಯಾಗಿಯೇ ಉಳಿದಿದೆ' ಎಂದರು.

ADVERTISEMENT

`ಈಗ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಜ್ಯೋತಿಷವನ್ನು ಸೇರಿಸಲಾಗಿದೆ. ರಾಜ್ಯದಲ್ಲಿ 40 ರಷ್ಟು ಜ್ಯೋತಿಷ ಕಾಲೇಜುಗಳಿವೆ. ಈ ಎಲ್ಲ ಕಾಲೇಜುಗಳ ಮಾತೃಸಂಸ್ಥೆಯ ರೂಪದಲ್ಲಿ ಡೀಮ್ಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು. ಆಗ ಜ್ಯೋತಿಷಕ್ಕೆ ಒಂದು ಸ್ಥಾನಮಾನವು ದೊರಕುತ್ತದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.