ADVERTISEMENT

ನಿವೃತ್ತ ಯೋಜನಾಧಿಕಾರಿ ವಾಸುದೇವ್‌ ಬಳಿ ₹ 30.65 ಕೋಟಿ ಆಸ್ತಿ ಪತ್ತೆ!

ಬಿಡಿಎಯ 6 ನಿವೇಶನಗಳ ಒಡೆಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 19:31 IST
Last Updated 27 ನವೆಂಬರ್ 2021, 19:31 IST
ವಾಸುದೇವ್ ಆರ್‌.ಎನ್‌.
ವಾಸುದೇವ್ ಆರ್‌.ಎನ್‌.   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆರು ನಿವೇಶನ ಸೇರಿದಂತೆ 50ಕ್ಕೂ ಹೆಚ್ಚು ಸ್ಥಿರಾಸ್ತಿಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾಧಿಕಾರಿ ವಾಸುದೇವ್‌ ಆರ್‌.ಎನ್‌. ಬಳಿ ₹ 30.65 ಕೋಟಿ ಆಸ್ತಿ ಇರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ತೆಮಾಡಿದೆ.

ಈ ಅಧಿಕಾರಿ ತಮ್ಮ ಸೇವಾವಧಿಯಲ್ಲಿ ವೇತನ ಮತ್ತು ಇತರ ಅಧಿಕೃತ ಮೂಲಗಳಿಂದ ₹ 1.5 ಕೋಟಿ ಆದಾಯ ಗಳಿಸಿದ್ದರು. ಅವರ ಬಳಿ ₹ 29.15 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ. ಅಧಿಕೃತ ಆದಾಯಕ್ಕೆ ಹೋಲಿಸಿದರೆ ಶೇಕಡ 1,408ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಅಧಿಕಾರಿಗೆ ಸಂಬಂಧಿಸಿದಂತೆ ಬುಧವಾರ ವಿವಿಧೆಡೆ ದಾಳಿ ನಡೆಸಿದ್ದ ಎಸಿಬಿ, ಶೋಧ ಆರಂಭಿಸಿತ್ತು. ಶನಿವಾರ ಶೋಧ ಪೂರ್ಣಗೊಂಡಿದ್ದು, ವಾಸುದೇವ್‌ ಅವರನ್ನು ಬಂಧಿಸಲಾಗಿದೆ.

ADVERTISEMENT

ಕೆಂಗೇರಿಯಲ್ಲಿ ಎರಡು, ನೆಲಮಂಗಲ ತಾಲ್ಲೂಕಿನ ಸೋಂಪುರದಲ್ಲಿ ಎರಡು ಮತ್ತು ಮಲ್ಲೇಶ್ವರದ ಒಂದು ಸ್ಥಳದಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದು, 28 ಮನೆಗಳಿವೆ. ಕೆಂಗೇರಿ ಉಪ ನಗರದಲ್ಲಿ ಪತ್ನಿ ಲಲಿತಾ ಹೆಸರಿಗೆ ಎರಡು ಮನೆ ಖರೀದಿಸಿದ್ದರು. ಎರಡು ಫ್ಲ್ಯಾಟ್‌ಗಳ ಖರೀದಿಗೆ ಕೋಟಿಗಟ್ಟಲೆ ಮುಂಗಡ ನೀಡಿರುವುದೂ ಪತ್ತೆಯಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ ಬಡಾವಣೆಗಳಲ್ಲಿ ಆರು ನಿವೇಶನಗಳನ್ನು ವಾಸುದೇವ್‌ ಪಡೆದಿರುವುದು ಪತ್ತೆಯಾಗಿದೆ. ಒಟ್ಟು 19 ನಿವೇಶನಗಳು, ನೆಲಮಂಗಲ ತಾಲ್ಲೂಕಿನ ವಿವಿಧೆಡೆ ಇಬ್ಬರು ಪುತ್ರರ ಹೆಸರಿನಲ್ಲಿ 13 ಎಕರೆ 35 ಗುಂಟೆ ಮತ್ತು ಸ್ವಂತ ಹೆಸರಿನಲ್ಲಿ 4 ಎಕರೆ 7 ಗುಂಟೆ ಜಮೀನು ಖರೀದಿಸಿರುವುದು ಬಯಲಿಗೆ ಬಂದಿದೆ.

ಆರೋಪಿಯ ಬಳಿ ಸ್ಕೋಡಾ, ಬೆಂಝ್‌, ವೋಲ್ವೊ, ಟಾಟಾ ಮತ್ತು ಟೊಯೊಟಾ ಕಂಪನಿಯ ಒಟ್ಟು ಐದು ಐಷಾರಾಮಿ ಕಾರುಗಳು ಪತ್ತೆಯಾಗಿವೆ. 935.69 ಗ್ರಾಂ. ಚಿನ್ನ, 9 ಕೆ.ಜಿ. ಬೆಳ್ಳಿ, ₹ 17.27 ಲಕ್ಷ ನಗದು ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ₹ 1.31 ಕೋಟಿ ಠೇವಣಿ ಇರುವುದನ್ನು ತನಿಖಾ ತಂಡ ಪತ್ತೆಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.