ADVERTISEMENT

5 ನಗರ ಪಾಲಿಕೆಗಳಿಗೆ ₹300 ಕೋಟಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಆಡಳಿತಾತ್ಮಕ ವೆಚ್ಚ, ವೇತನ, ನಿವೃತ್ತಿ ಸೌಲಭ್ಯಗಳಿಗೆ ಅನುದಾನ: ಡಿಸಿಎಂ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 15:35 IST
Last Updated 3 ಸೆಪ್ಟೆಂಬರ್ 2025, 15:35 IST
ಜಿಬಿಎ ನಾಮಫಲಕ ಅನಾವರಣ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಭುವನೇಶ್ವರಿ ಚಿತ್ರಕ್ಕೆ ಪೂಜೆ ಸಲ್ಲಿಸಿದರು
ಜಿಬಿಎ ನಾಮಫಲಕ ಅನಾವರಣ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಭುವನೇಶ್ವರಿ ಚಿತ್ರಕ್ಕೆ ಪೂಜೆ ಸಲ್ಲಿಸಿದರು   

ಬೆಂಗಳೂರು: ‘ಐದು ನಗರ ಪಾಲಿಕೆಗಳ ಆಡಳಿತಾತ್ಮಕ ವೆಚ್ಚ, ವೇತನ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡಲು, ಬಿಬಿಎಂಪಿಯ ಖಾತೆಗಳಿಂದ ಸುಮಾರು ₹300 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ ಕಚೇರಿಯ ನಾಮಫಲಕವನ್ನು ಬುಧವಾರ ಅನಾವರಣಗೊಳಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳ ಸುಧಾರಣೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ 500 ಮಂದಿ ಎಂಜಿನಿಯರ್‌ಗಳ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ಈ ಹಿಂದೆ 198 ವಾರ್ಡ್‌ಗಳಿದ್ದವು. ಈಗ 500 ವಾರ್ಡ್‌ ರಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರತಿ ಪಾಲಿಕೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು, ಒಬ್ಬರು ಕೆಎಎಸ್, ಇಬ್ಬರು ಮುಖ್ಯ ಎಂಜಿನಿಯರ್‌ಗಳು  ಕೆಲಸ ಮಾಡಲಿದ್ದಾರೆ. ಬೆಂಗಳೂರು ನಗರಕ್ಕೆ ಉತ್ತಮವಾದ ಆಡಳಿತ ಹಾಗೂ ಜನರ ಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಬೇಕು ಎಂದು ನಿರ್ಣಯಗಳನ್ನು ತೆಗೆದುಕೊಂಡು ಪಾಲಿಕೆಗಳು ಕೆಲಸ ಮಾಡಲಿವೆ’ ಎಂದರು.

ADVERTISEMENT

‘ಐದು ನಗರ ಪಾಲಿಕೆಗಳ ನೂತನ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ನವೆಂಬರ್ 1ರಂದು ಭೂಮಿಪೂಜೆ ಮಾಡಲಾಗುತ್ತದೆ. ಎಲ್ಲಾ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು. ಕಚೇರಿ ವಿನ್ಯಾಸಗಳನ್ನು ನಾಗರಿಕರು ಕಳುಹಿಸಬಹುದು. ಆಯ್ಕೆಯಾದವರಿಗೆ ₹5 ಲಕ್ಷ ಬಹುಮಾನ ನೀಡಲಾಗುತ್ತದೆ’ ಎಂದು ತಿಳಿಸಿದರು

‘ಹೊಸ ಪ್ರದೇಶಗಳನ್ನು ಐದು ನಗರ ಪಾಲಿಕೆಗಳ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಸ್ಥಳೀಯ ಸಂಸ್ಥೆಗಳನ್ನು ಜಿಬಿಎ ವ್ಯಾಪ್ತಿಗೆ ಈಗಲೇ ಸೇರಿಸಿದರೆ ಪ್ರಸ್ತುತ ಪ್ರತಿನಿಧಿಗಳಾಗಿರುವವರನ್ನೂ ಪಾಲಿಕೆ ಸದಸ್ಯರು ಎಂದು ಪರಿಗಣಿಸಬೇಕಾಗುತ್ತದೆ. ಈಗ ರಚನೆಯಾಗಿರುವ ಪಾಲಿಕೆಗಳಿಗೆ ಚುನಾವಣೆ ನಡೆದ ನಂತರ ಇತರೇ ಪ್ರದೇಶಗಳ ವಿಲೀನದ ಬಗ್ಗೆ ಭವಿಷ್ಯದಲ್ಲಿ ಯೋಚಿಸಲಾಗವುದು’ ಎಂದರು.

‘ಆಯುಕ್ತರಿಂದ 17–18 ಗಂಟೆ ಕೆಲಸ ನಿರೀಕ್ಷೆ’

‘ಐದು ನಗರ ಪಾಲಿಕೆಗಳ ಆಯುಕ್ತರು ದಿನಕ್ಕೆ 17 ರಿಂದ 18 ಗಂಟೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಹಿರಿಯ ಅಧಿಕಾರಿಗಳ ಜೊತೆ ಯುವ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಬಿಎ ಆಯುಕ್ತರು ಪಾದಚಾರಿ ರಸ್ತೆ ನೀರು ರಸ್ತೆ ಸೇರಿದಂತೆ ಇತರೆ ಕೆಲಸಗಳ ಬಗ್ಗೆ ಬೆಳಿಗ್ಗೆ ವಾಯುವಿಹಾರದ ಸಂದರ್ಭದಲ್ಲಿ ಪರಿಶೀಲನೆ ಮಾಡುತ್ತಾರೆ. ಹಾಗೆಯೇ ಪಾಲಿಕೆಗಳ ಆಯುಕ್ತರು ರಸ್ತೆಗಿಳಿದು ಕೆಲಸ ಮಾಡಬೇಕು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು. ‘ಸಮಸ್ಯೆಗಳು ದಿನ ಬೆಳಗಾಗುವುದರಲ್ಲಿ ಬಗೆಹರಿಯುವುದಿಲ್ಲ. ಕುಡಿಯುವ ನೀರು ರಸ್ತೆ ಗುಂಡಿ ಸಂಚಾರ ದಟ್ಟಣೆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಲಾಗುವುದು’ ಎಂದರು.

‘ಪದ ಸೂಚಿಸಿದರೆ ‘ಗ್ರೇಟರ್’ ಬದಲು

‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿನ ‘ಗ್ರೇಟರ್’ ಇಂಗ್ಲಿಷ್‌ ಪದಕ್ಕೆ ಉತ್ತಮ ಕನ್ನಡ ಪದ ಸೂಚಿಸಿದರೆ ಬದಲಾವಣೆ ಮಾಡಬಹುದು. ಮುಂಬೈ ಸೇರಿದಂತೆ ಬೇರೆ ಕಡೆಯೂ ಇದೇ ಪರಿಸ್ಥಿತಿ ಬಂದಿತ್ತು. ಮಾತೃಭಾಷೆಯನ್ನು ಕಡೆಗಣಿಸುವುದಿಲ್ಲ’ ಎಂದು ಜಿಬಿಎ ಉಪಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಇಂಗ್ಲಿಷ್ ಹೆಸರಿಟ್ಟಿರುವ ಬಗ್ಗೆ ಶಾಸಕ ಅಶ್ವತ್ಥ ನಾರಾಯಣ ಆಕ್ಷೇಪಿಸಿದ್ದಾರೆ. ಯಾವ ಹೆಸರು ಇಡಬೇಕು ಎಂದು ಅವರ ಸಲಹೆ ಕೇಳುತ್ತೇನೆ’ ಎಂದರು. ‘ಜಿಬಿಎ ಕೇವಲ ಉಸ್ತುವಾರಿ ನೋಡಿಕೊಳ್ಳುತ್ತದೆ. ಮಿಕ್ಕ ಎಲ್ಲಾ ಸಂಗತಿಗಳು ನಗರ ಪಾಲಿಕೆಗಳ ವ್ಯಾಪ್ತಿಗೆ ಬರಲಿದೆ’ ಎಂದು ತಿಳಿಸಿದರು. ‘ಜಿಬಿಎಯಿಂದ ಬೆಂಗಳೂರು ಅಭಿವೃದ್ಧಿ ಸಾಧ್ಯ. ಸಾರ್ವಜನಿಕರೂ ಕೈ ಜೋಡಿಸಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಜನರು ಪ್ರಾಮಾಣಿಕವಾಗಿ ತಮ್ಮ ಆಸ್ತಿಗಳನ್ನು ಘೋಷಣೆ ಮಾಡಿ ತೆರಿಗೆ ಪಾವತಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.