ADVERTISEMENT

ಬಿಬಿಎಂಪಿಯಿಂದ ಸಸಿಯೊಂದಕ್ಕೆ ₹3,108 ವೆಚ್ಚ

ಕೆ–ರೈಡ್‌ ಯೋಜನೆಗಾಗಿ ಬುಡಮೇಲಾದ ಮರಗಳಿಗೆ ಪರ್ಯಾಯವಾಗಿ ಗಿಡ ನೆಡುವ ಕಾರ್ಯಕ್ರಮ

ಆರ್. ಮಂಜುನಾಥ್
Published 5 ಫೆಬ್ರುವರಿ 2025, 23:01 IST
Last Updated 5 ಫೆಬ್ರುವರಿ 2025, 23:01 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎರಡು ವಲಯಗಳಲ್ಲಿ 34 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲು ಪ್ರತಿ ಸಸಿಗೆ ₹3,108 ವೆಚ್ಚ ಮಾಡಲು ಅರಣ್ಯ ವಿಭಾಗ ಮತ್ತೆ ಮುಂದಾಗಿದೆ.

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್‌ (ಕೆ–ರೈಡ್‌) ಯೋಜನೆಯಿಂದ ಮರಗಳು ತೆರವಾಗಿರುವುದಕ್ಕೆ ಪರ್ಯಾಯವಾಗಿ ಸಸಿಗಳನ್ನು ನೆಟ್ಟು, ಪೋಷಿಸುವ ಕಾರ್ಯವನ್ನು ಬಿಬಿಎಂಪಿಗೆ ವಹಿಸಲಾಗಿದೆ. ಹಣ ಪಡೆದುಕೊಂಡಿರುವ ಬಿಬಿಎಂಪಿ ಅರಣ್ಯ ವಿಭಾಗ, ಸಸಿ ನೆಡುವ ಪ್ರಕ್ರಿಯೆ ಆರಂಭಿಸಿದೆ.

ADVERTISEMENT

ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಸಸಿ ನೆಟ್ಟು, ಐದು ವರ್ಷ ಅವುಗಳನ್ನು ನಿರ್ವಹಣೆ ಮಾಡಲು ಅರಣ್ಯ ವಿಭಾಗದಿಂದ ಟೆಂಡರ್‌ ಕರೆಯಲಾಗಿದೆ. ಎರಡು ವಲಯಗಳಲ್ಲೇ ಸಸಿ ನೆಡುವ ಕಾರ್ಯ ಕೈಗೊಳ್ಳಬೇಕಾಗಿದ್ದರೂ, ಒಂಬತ್ತು ಭಾಗ ಮಾಡಲಾಗಿದೆ. ಮಹದೇವಪುರ ವಲಯದಲ್ಲಿ ನಾಲ್ಕು ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಐದು ಭಾಗಗಳಲ್ಲಿ ಸಸಿ ನೆಡಲು ಪ್ರತ್ಯೇಕ ಯೋಜನೆ ರೂಪಿಸಲಾಗಿದೆ.

‘ಒಂದು ಸಸಿಗೆ ₹3 ಸಾವಿರದಷ್ಟು ವೆಚ್ಚ ಮಾಡುವ ಅಗತ್ಯವಿಲ್ಲ. ಎಂತಹದ್ದೇ ಸಸಿಯಾದರೂ, ಆರು ಅಡಿ ಬೆಳೆದಿದ್ದರೂ ಗರಿಷ್ಠ ₹200ಕ್ಕೆ ಸಿಗುತ್ತದೆ. ನಿರ್ವಹಣೆ ಮಾಡಲೆಂದು ಸಾವಿರಾರು ರೂಪಾಯಿ ವ್ಯಯ ಮಾಡುತ್ತಿರುವುದು ದುಂದುವೆಚ್ಚವೇ ಸರಿ. ಬಿಬಿಎಂಪಿ ಈವರೆಗೆ ಲಕ್ಷಾಂತರ ಸಸಿ ನೆಟ್ಟಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ಅವುಗಳನ್ನು ಉಳಿಸಿಕೊಂಡಿಲ್ಲ. ವೆಚ್ಚ ಮಾಡಲೆಂದೇ ಸಸಿ ನೆಡುವ ಯೋಜನೆ ರೂಪಿಸುತ್ತಿದ್ದಾರೆ’ ಎಂದು ಪರಿಸರ ಕಾರ್ಯಕರ್ತ ವಿಜಯ್‌ ದೂರುತ್ತಾರೆ.

ಇದೇ ಮೊದಲಲ್ಲ:

ಬಿಬಿಎಂಪಿ ಅರಣ್ಯ ಇಲಾಖೆ ಪ್ರತಿ ಸಸಿಗೆ ₹3 ಸಾವಿರಕ್ಕೂ ಹೆಚ್ಚು ವೆಚ್ಚ ಮಾಡುತ್ತಿರುವುದು ಇದೇ ಮೊದಲಲ್ಲ. ದಾಬಸ್‌ಪೇಟೆ ಮತ್ತು ದೊಡ್ಡಬೆಳವಂಗಲ ನಡುವೆ ನಗರದ ಹೊರವಲಯದಲ್ಲಿ ನಿರ್ಮಾಣವಾಗುವ ಸ್ಯಾಟಲೈಟ್‌ ಟೌನ್‌ ವರ್ತುಲ ರಸ್ತೆಯ (ಎಸ್‌ಟಿಆರ್‌ಆರ್) ಎರಡೂ ಬದಿಯಲ್ಲಿ 10,900 ಗಿಡಗಳನ್ನು ನೆಡಲು ₹3.4 ಕೋಟಿ ವೆಚ್ಚ ಮಾಡಲು 2024ರ ಜುಲೈನಲ್ಲಿ ಟೆಂಡರ್‌ ಕರೆದು, ಕಾರ್ಯಾದೇಶ ನೀಡಲಾಗಿತ್ತು. ಈ ವರ್ಷ ಬೇಸಿಗೆ ಆರಂಭವಾಗುತ್ತಿದ್ದರೂ ಆ ಸಸಿಗಳನ್ನು ನೆಟ್ಟಿರುವ ಕುರುಹುಗಳಿಲ್ಲ, ಜಿ–ಟ್ಯಾಗ್‌ ಕೂಡ ಅಳವಡಿಸಿಲ್ಲ.

ಬಿಬಿಎಂಪಿಯ ವಲಯಗಳಲ್ಲಿ 1,13,500 ಸಸಿಗಳನ್ನು ನೆಡಲು 27 ಕಾಮಗಾರಿಗಳನ್ನಾಗಿ ವಿಭಾಗಿಸಿ 2024ರಲ್ಲಿ ಕೆಲಸ ಆರಂಭಿಸಲಾಗಿದೆ. ಇದಕ್ಕಾಗಿ ₹21.36 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಈ ಯೋಜನೆಯಲ್ಲಿ ಪ್ರತಿ ಸಸಿಗೆ ₹1,881 ವೆಚ್ಚವಾಗುತ್ತಿದೆ. ಸಸಿ ನೆಟ್ಟು, ಪೋಷಿಸಲು ದುಬಾರಿ ಮೊತ್ತವನ್ನು ವೆಚ್ಚ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದ್ದರೂ, ಅರಣ್ಯ ವಿಭಾಗದಿಂದ ಕಾಮಗಾರಿ ಮುಂದುವರಿಸಲಾಗಿದೆ.

ಸಸಿಗಳಿಗೆ ದುಂದು ವೆಚ್ಚದ ಬಗ್ಗೆ ಪ್ರತಿಕ್ರಿಯೆಗೆ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಸ್ವಾಮಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.