ADVERTISEMENT

ಬೆಂಗಳೂರು: ಒಕ್ಕಲೆಬ್ಬಿಸುವ ಆತಂಕದಲ್ಲಿ 334 ಕುಟುಂಬ!

ಉತ್ತರಹಳ್ಳಿ ಭುವನೇಶ್ವರಿನಗರದ ಕೊಳೆಗೇರಿ ಕುಟುಂಬಗಳು ಅತಂತ್ರ

ವಿಜಯಕುಮಾರ್ ಎಸ್.ಕೆ.
Published 7 ಜನವರಿ 2022, 19:40 IST
Last Updated 7 ಜನವರಿ 2022, 19:40 IST
ಭುವನೇಶ್ವರಿನಗರದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳು –ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಭುವನೇಶ್ವರಿನಗರದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳು –ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ಉತ್ತರಹಳ್ಳಿ ಭುವನೇಶ್ವರಿನಗರದ ಕೊಳೆಗೇರಿಯಲ್ಲಿ ಸರ್ಕಾರ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳಲ್ಲಿ ವಾಸ ಇರುವ 334 ಕುಟುಂಬಗಳು ಒಕ್ಕಲೆಬ್ಬಿಸುವ ಆತಂಕದಲ್ಲಿವೆ. ಹಾಲಿ ವಾಸ ಇರುವವರನ್ನು ಒಕ್ಕಲೆಬ್ಬಿಸಿ ಬೇರೆಯವರಿಂದ ಹಣ ಪಡೆದು ಮನೆಗಳನ್ನು ವಿತರಿಸುವ ಹುನ್ನಾರ ನಡೆಯುತ್ತಿದೆ ಎಂದು ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ.

ಭುವನೇಶ್ವರಿನಗರದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ಕಟ್ಟಿಕೊಡುವ ಪ್ರಕ್ರಿಯೆ 2011ರಿಂದ ಆರಂಭವಾಗಿದೆ. ಗುಡಿಸಿಲು, ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಿದ್ದ ಜನರನ್ನು ಬೇರೆಡೆ ಸ್ಥಳಾಂತರಿಸಿ ಅದೇ ಜಾಗದಲ್ಲಿ ನಾಲ್ಕು ಮತ್ತು ಐದು ಅಂತಸ್ತಿನ 47 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ 47 ಬ್ಲಾಕ್‌ಗಳಲ್ಲಿ 880 ಮನೆಗಳಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಂದ ₹28 ಸಾವಿರ ಮತ್ತು ಇತರ ಸಮುದಾಯದವರಿಂದ ₹33,600 ಪಾವತಿಕೊಂಡು ಮನೆ ವಿತರಿಸುವುದು ಯೋಜನೆಯ ಉದ್ದೇಶ. ಅದರಂತೆ 421 ನಿವಾಸಿಗಳು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಡಿ.ಡಿ ಮೂಲಕ ಹಣ ಪಾವತಿಸಿದ್ದಾರೆ.

ADVERTISEMENT

ಮನೆ ನಿರ್ಮಾಣ ಮಾಡಿದ ವೇಳೆಯ ಪಟ್ಟಿಗೂ ಸದ್ಯ ವಾಸ ಇರುವ ನಿವಾಸಿಗಳ ಪಟ್ಟಿಗೂ ವ್ಯತ್ಯಾಸ ಇದೆ. ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ಕೆಲವರು ಹಣ ಪಾವತಿಸಲು ಸಾಧ್ಯವಾಗಿಲ್ಲ. ಮನೆ ನಿರ್ಮಿಸುವಾಗ ಒಂದು ಕುಟುಂಬ ಇದ್ದದ್ದು ದಿನ ಕಳೆದಂತೆ ಮಕ್ಕಳು ದೊಡ್ಡವರಾಗಿ ಮೂರು, ನಾಲ್ಕು ಕುಟುಂಬ ಆಗಿವೆ. 880 ಮನೆಗಳು ಲಭ್ಯ ಇರುವುದರಿಂದ ಖಾಲಿ ಇರುವ ಮನೆಗಳಲ್ಲಿ ಹಲವರು ಈಗಾಗಲೇ ವಾಸವಿದ್ದಾರೆ. ಅಲ್ಲದೇ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಡಿ.ಡಿ ತೆಗೆದು ಹಣ ಪಾವತಿಸಿದ್ದಾರೆ.

‘ಡಿ.ಡಿ ಪ್ರತಿಯನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸಲ್ಲಿಸಿದ್ದರೂ ಸ್ವೀಕೃತಿ ಪತ್ರ ನೀಡಿಲ್ಲ. ಇದೇ ಕೊಳೆಗೇರಿಯಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ವಾಸ ಇರುವವರನ್ನು ಬಿಟ್ಟು ಬೇರೆ ಬೇರೆ ಕಡೆಯಿಂದ ಕರೆತಂದು ಮನೆಗಳ ಹಕ್ಕುಪತ್ರ ನೀಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೊರಟಿದ್ದಾರೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘ಪೊಲೀಸರ ನೆರವು ಪಡೆದು ನಮ್ಮನ್ನು ಹೊರದಬ್ಬಲು ಸಂಚು ನಡೆಸುತ್ತಿರುವ ಮಾಹಿತಿಯೂ ಇದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ. ಹಾಗೊಂದು ವೇಳೆ ಸರ್ಕಾರ ದಬ್ಬಾಳಿಕೆ ನಡೆಸಿದರೆ ಇದೇ ಸ್ಥಳದಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಮನೆ ಇಲ್ಲದೆ ಜೀವನ ನಡೆಸುವುದಾದರೂ ಹೇಗೆ, ಅದರ ಬದಲು ನಾವು ಸಾಯುವುದೇ ಮೇಲು’ ಎಂದು ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಮಹಿಳೆಯೊಬ್ಬರು ಕಣ್ಣೀರಿಟ್ಟರು.

‘ಮನೆ ಮಾರಾಟಕ್ಕೆ ಹೊರಟಿರುವ ಅಧಿಕಾರಿಗಳು’

‘ಹಲವು ವರ್ಷಗಳಿಂದ ಈ ಜಾಗದಲ್ಲಿ ಬಡ ಕುಟುಂಬಗಳು ವಾಸ ಇವೆ. ಇವರೆಲ್ಲ ಯಾವುದೋ ಒಂದು ಜಾತಿ ಅಥವಾ ಧರ್ಮಕ್ಕೆ ಸೇರಿದವರಲ್ಲ. ಎಲ್ಲ ಸಮುದಾಯದ ಬಡವರಿದ್ದಾರೆ. ಅವರನ್ನು ಒಕ್ಕಲೆಬ್ಬಿಸಿ ಮನೆಗಳನ್ನು ಮಾರಾಟ ಮಾಡಿಕೊಳ್ಳಲು ಅಧಿಕಾರಿಗಳು ಹೊರಟಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

‘ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿ ಬಡವರನ್ನು ಬೀದಿಪಾಲು ಮಾಡಲು ಮುಂದಾಗಿದ್ದಾರೆ. ಬೇರೆಡೆ ವಾಸ ಇದ್ದವರನ್ನು ಕರೆಸಿ ₹2 ಲಕ್ಷದಿಂದ ₹3 ಲಕ್ಷದ ತನಕ ಲಂಚ ಪಡೆದು ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಗೂಂಡಾಗಳನ್ನು ಕಳಿಸಿ ನಿವಾಸಿಗಳಿಗೆ ಬೆದರಿಕೆ ಹಾಕುವ ಪ್ರಯತ್ನವೂ ನಡೆಯುತ್ತಿದೆ. ನಿರ್ಗತಿಕ ಬಡ ಕುಟುಂಬಗಳನ್ನು ಬೀದಿಗೆ ತಳ್ಳಲು ನಾವು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಸ್ಥಳೀಯರಿಗೆ ಅನ್ಯಾಯವಾಗದು: ಎಂ. ಕೃಷ್ಣಪ್ಪ

‘ಕಟ್ಟಡಗಳನ್ನು ನಿರ್ಮಿಸುವುದಕ್ಕೂ ಮುನ್ನ ಈ ಸ್ಥಳದಲ್ಲಿ ವಾಸವಿದ್ದ 450 ಕುಟುಂಬಗಳಿಗೆ ಈಗಾಗಲೇ ಮನೆಗಳನ್ನು ವಿತರಿಸಲಾಗಿದೆ. ಬಾಕಿ ಇರುವ ಕುಟುಂಬಗಳಲ್ಲಿ ಸ್ಥಳೀಯರಿದ್ದರೆ ಅನ್ಯಾಯ ಆಗುವುದಿಲ್ಲ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಸ್ಪಷ್ಟಪಡಿಸಿದರು.

‘ಬಾಕಿ ಉಳಿದಿರುವ ಮನೆಗಳನ್ನು ಕೋರಿ ಅರ್ಜಿ ಸಲ್ಲಿಸಿ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸಾಕಷ್ಟು ಮಂದಿ ಹಣ ಪಾವತಿ ಮಾಡಿದ್ದಾರೆ. ಯಾರಿಗೆ ಮನೆ ನೀಡಬೇಕು ಎಂಬುದು ವಸತಿ ಇಲಾಖೆಗೆ ಬಿಟ್ಟ ವಿಷಯ. ಖಾಲಿ ಇರುವ ಮನೆಗಳಿಗೆ ಫಲಾನುಭವಿಗಳ ಪಟ್ಟಿ ಕೇಳಿದಾಗ ನಾನು ಮತ್ತು ಸಂಸದರು ಕೆಲವರ ಹೆಸರು ಕೊಟ್ಟಿದ್ದೇವೆ’ ಎಂದರು.

‘11 ವರ್ಷದಿಂದ ಈ ವಿಷಯ ನನಗೆ ಚೆನ್ನಾಗಿ ಅರಿವಿದೆ. ಕೆಲವರು ಬೇರೆ ಬೇರೆ ಕಡೆಯಿಂದ ಬಂದುಹಣ ಪಾವತಿಸದೆ ಮನೆಗಳಿಗೆ ಸೇರಿಕೊಂಡಿದ್ದಾರೆ. ಯಾರು ಸ್ಥಳೀಯರು ಎಂಬುದು ಗೊತ್ತಿದೆ. ಹಾಗೊಂದು ವೇಳೆ ಸ್ಥಳೀಯರಿಗೆ ತೊಂದರೆ ಆಗಿದ್ದರೆ ಪರಿಶೀಲಿಸುತ್ತೇನೆ. ಅವರಿಗೆ ಅನ್ಯಾಯವಾಗಲು ನಾನೂ ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.