ADVERTISEMENT

ಬೆಂಗಳೂರು: 368 ಮರಗಳ ರಕ್ಷಣೆ; ಸಲಹೆ ನೀಡಲು ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 16:06 IST
Last Updated 3 ಸೆಪ್ಟೆಂಬರ್ 2025, 16:06 IST
   

ಬೆಂಗಳೂರು: ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿರುವ 368 ಮರಗಳಿರುವ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದ್ದು, ನಾಗರಿಕರು ಸಲಹೆ ನೀಡುವ ಅವಧಿಯನ್ನು ಸೆ.8ರವರೆಗೆ ವಿಸ್ತರಿಸಿದೆ.

ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧ್ಯಕ್ಷತೆಯಲ್ಲಿ ಜೂನ್‌ 25ರಂದು ನಡೆದ ವಿಶೇಷ ಸಭೆಯಲ್ಲಿ ‘ಕಂಟೊನ್ಮೆಂಟ್‌ ರೈಲ್ವೆ ಕಾಲೊನಿಯ ಆವರಣದಲ್ಲಿರುವ ಸುಮಾರು ಎಂಟು ಎಕರೆಯಲ್ಲಿ 368 ವಿವಿಧ ಜಾತಿಯ ಮರಗಳ ಕುರಿತು ಚರ್ಚಿಸಿ, ಜೀವವೈವಿಧ್ಯ ಕಾಯ್ದೆ–2002 ಮತ್ತು ಕರ್ನಾಟಕ ಜೀವವೈವಿಧ್ಯ ನಿಯಮಗಳು– 2005ರ ನಿಯಮ 20ರಡಿ ಆ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಗಿತ್ತು. ಇದರ ಬಗ್ಗೆ ಪ್ರಕಟಣೆ ಹೊರಡಿಸಿ, ಆಗಸ್ಟ್‌ 30ರವರೆಗೆ ಸಲಹೆ/ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು.

‘ಕಂಟೊನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ 368 ಮರಗಳನ್ನು ಕಡಿಯಲಾಗುತ್ತಿದೆ’ ಎಂದು ಮರಗಳಿಗೆ ಭಿತ್ತಿಪತ್ರ ಅಂಟಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯವರು ಭಾನುವಾರ ಪ್ರತಿಭಟನೆ ನಡೆಸಿದ್ದರು. ಹಲವು ಪರಿಸರ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬಹುತೇಕರು ಮಂಡಳಿಗೆ ಸಲಹೆ ನೀಡಿಲ್ಲ ಎನ್ನಲಾಗಿದೆ.

ADVERTISEMENT

‘ಎಂಟು ಎಕರೆಯಲ್ಲಿರುವ ಮರಗಳು, ಗಿಡಗಳು, ಪೊದೆಗಳು, ಪಕ್ಷಿ ಮತ್ತು ಪ್ರಾಣಿಗಳ ಸಮೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರಕಟಣೆಗೆ ಸಲಹೆಗಳನ್ನು ನೀಡಲು ಇನ್ನಷ್ಟು ಅವಕಾಶ ಕಲ್ಪಿಸಲಾಗಿದೆ’ ಎಂದು ಜೀವವೈವಿಧ್ಯ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.