ADVERTISEMENT

ನಗರಕ್ಕೆ ಪ್ರತ್ಯೇಕ ಆರೋಗ್ಯ ನೀತಿ ಜಾರಿ: ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ | ಕಣ್ಣಿನ ಆರೈಕೆಗೆ 393 ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:58 IST
Last Updated 3 ಜುಲೈ 2025, 15:58 IST
ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಹಿಳೆಯೊಬ್ಬರಿಗೆ ಕನ್ನಡಕ ವಿತರಿಸಿದರು. ದಿನೇಶ್ ಗುಂಡೂರಾವ್, ಪ್ರಿಯಕೃಷ್ಣ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಹಿಳೆಯೊಬ್ಬರಿಗೆ ಕನ್ನಡಕ ವಿತರಿಸಿದರು. ದಿನೇಶ್ ಗುಂಡೂರಾವ್, ಪ್ರಿಯಕೃಷ್ಣ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ತಜ್ಞರ ತಂಡ ವರದಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿಯೇ ಪ್ರತ್ಯೇಕ ಆರೋಗ್ಯ ನೀತಿಯನ್ನು ಜಾರಿಗೆ ತರಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ 393 ‘ಆಶಾಕಿರಣ ದೃಷ್ಟಿ ಕೇಂದ್ರ’ಗಳಿಗೆ (ವಿಷನ್ ಸೆಂಟರ್) ಚಾಲನೆ ನೀಡಲಾಯಿತು. 

ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ‘ಬೆಂಗಳೂರಿನ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ನಿರ್ವಹಿಸುತ್ತಿದೆ. ಕೆಲವೆಡೆ ಉತ್ತಮ ಕಟ್ಟಡಗಳಿದ್ದರೂ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳ ಪ್ರಯೋಜನ ಜನರಿಗೆ ಸಿಗುವಂತಾಗಬೇಕು. ಆರೋಗ್ಯ ನೀತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸೇರಿ ವರದಿ ತಯಾರಿಸುತ್ತಿದೆ. ಈ ವರದಿ ಸಿದ್ಧವಾದ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ನೀತಿಯನ್ನು ಜಾರಿ ಮಾಡಲಾಗುವುದು’ ಎಂದರು.  

ADVERTISEMENT

‘ಆಶಾಕಿರಣ ಯೋಜನೆಯನ್ನು ಮರುವಿನ್ಯಾಸಗೊಳಿಸಿ, ನಿರಂತರ ಕಣ್ಣಿನ ಆರೋಗ್ಯ ಸೇವೆ ಒದಗಿಸಲು 393 ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ದೃಷ್ಟಿದೋಷ ಹೊಂದಿದವರು ತಪಾಸಣೆ ಮಾಡಿಸಿಕೊಂಡು, ಉಚಿತವಾಗಿ ಕನ್ನಡಕಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನೂ ಉಚಿತವಾಗಿ ನಡೆಸಲಾಗುತ್ತದೆ’ ಎಂದು ಹೇಳಿದರು.

ಇಲಾಖೆ ಜಂಟಿ ನಿರ್ದೇಶಕಿ ರಜನಿ ಎಂ., ‘ರಾಜ್ಯದಲ್ಲಿ 2022ರಲ್ಲಿ ಆರಂಭವಾದ ಆಶಾಕಿರಣ ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ, 8 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿತ್ತು. ಒಟ್ಟು 1.40 ಕೋಟಿ ಜನರು ಪ್ರಾಥಮಿಕ ನೇತ್ರ ತಪಾಸಣೆಗೆ ಒಳಗಾಗಿದ್ದು, 24.50 ಲಕ್ಷ ಜನರಲ್ಲಿ ಕಣ್ಣಿನ ತೊಂದರೆ ಇರುವುದು ಪತ್ತೆಯಾಗಿತ್ತು. 4.3 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. 1.05 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದರು. 

ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಅವಿನಾಶ್ ಮೆನನ್, ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ವಿಕಾಸ್ ಸುರಳ್ಕರ್ ಕಿಶೋರ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಉಮಾ ಬುಗ್ಗಿ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಮದನಿ ಉಪಸ್ಥಿತರಿದ್ದರು. 

‘ಸರ್ಕಾರದಿಂದ ದೃಷ್ಟಿ ಗ್ಯಾರಂಟಿ’

ನೂತನ ದೃಷ್ಟಿ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಕಣ್ಣು ದೃಷ್ಟಿಗೆ ಸಮಸ್ಯೆಯಾದಲ್ಲಿ ಚಿಕಿತ್ಸೆ ನೀಡುವ ‘ದೃಷ್ಟಿ ಗ್ಯಾರಂಟಿ’ಯನ್ನು ಆಶಾಕಿರಣ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಯೋಜನೆಯಡಿ ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಕನ್ನಡಕ ಸೇರಿದಂತೆ ಚಿಕಿತ್ಸೆಯ ಸಾವಿರಾರು ರೂಪಾಯಿ ಹಣ ಉಳಿತಾಯವಾಗುತ್ತದೆ’ ಎಂದು ಹೇಳಿದರು.

ಆಶಾಕಿರಣ ಒಂದು ಮಾದರಿ ಯೋಜನೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಯೋಜನೆಯ ಅಧ್ಯಯನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ರಾಜ್ಯಕ್ಕೆ ತಂಡ ಕಳುಹಿಸುತ್ತಿರುವುದು ಹೆಮ್ಮೆಯ ಸಂಗತಿ.  
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.