ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇಕಡ 40ರಷ್ಟು ಲಂಚ ಪಡೆಯಲಾಗುತ್ತಿತ್ತು ಎಂಬ ಆರೋಪದ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್.ಎನ್. ನಾಗಮನೋಹನದಾಸ್ ನೇತೃತ್ವದ ಆಯೋಗವು ಕಾಮಗಾರಿಗಳ ಭೌತಿಕ ಸ್ಥಳ ತಪಾಸಣೆ ಆರಂಭಿಸಿದೆ. ರಾಜ್ಯದಾದ್ಯಂತ 1,729 ಕಾಮಗಾರಿಗಳನ್ನು ತಪಾಸಣೆಗೆ ಆಯ್ದುಕೊಳ್ಳಲಾಗಿದೆ.
ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳಲ್ಲಿನ ಕಾಮಗಾರಿಗಳ ಕುರಿತು ಆಯೋಗ ತನಿಖೆ ನಡೆಸುತ್ತಿದೆ. ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ಗರುತಿಸಿರುವ ಕಾಮಗಾರಿಗಳ ತಪಾಸಣೆಯನ್ನು ಆಯೋಗದ ಅಧಿಕಾರಿಗಳ ತಂಡಗಳು ಎಲ್ಲ ಜಿಲ್ಲೆಗಳಲ್ಲೂ ಪ್ರಾರಂಭಿಸಿವೆ. ಎರಡು ವಾರಗಳಲ್ಲಿ ಸ್ಥಳ ತಪಾಸಣೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
‘ಸಾರ್ವಜನಿಕರಿಂದ ಆಯೋಗಕ್ಕೆ 300 ದೂರುಗಳು ಬಂದಿದ್ದವು. ಅವುಗಳ ಪೈಕಿ 150ರಿಂದ 160 ದೂರುಗಳು ಆಯೋಗದ ಕಾರ್ಯವ್ಯಾಪ್ತಿಗೆ ಸೇರಿದ್ದವು. ಅವುಗಳಿಗೆ ಸಂಬಂಧಿಸಿದ ಕಡತ ಪರಿಶೀಲನೆ ಮತ್ತು ಸ್ಥಳ ತಪಾಸಣೆ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಆಯೋಗವೇ ಸ್ವಯಂ ಆಯ್ಕೆಮಾಡಿಕೊಂಡ ಕಾಮಗಾರಿಗಳ ಸ್ಥಳ ತಪಾಸಣೆ ಮಾಡಲಾಗುತ್ತಿದೆ’ ಎಂದು ಆಯೋಗದ ಅಧ್ಯಕ್ಷ ಎಚ್.ಎನ್. ನಾಗಮೋಹನದಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತನಿಖೆಗೆ ಆಯ್ಕೆಮಾಡಿಕೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಆಯೋಗದ ಅಧಿಕಾರಿಗಳು ಪರಿಶೀಲಿಸಿ, ಟಿಪ್ಪಣಿ ಸಿದ್ಧಪಡಿಸಿದ್ದಾರೆ. ಅದರ ಆಧಾರದಲ್ಲೇ ಸ್ಥಳ ತಪಾಸಣೆ ನಡೆಯಲಿದೆ. ಕ್ರಿಯಾಯೋಜನೆ ಅನುಸಾರ ಕಾಮಗಾರಿ ನಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಕಳಪೆ ಕಾಮಗಾರಿ, ಅವ್ಯವಾಹರ ನಡೆದಿದೆಯೆ ಎಂಬುದನ್ನು ಪರಿಶೀಲಿಸಲು ಸ್ಥಳ ತಪಾಸಣೆ ಆರಂಭಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ 52ರಿಂದ 55 ಕಾಮಗಾರಿಗಳನ್ನು ಆಯ್ದುಕೊಳ್ಳಲಾಗಿದೆ. ಆಯೋಗದಲ್ಲಿ ವಿಷಯ ತಜ್ಞರಾಗಿ ನೇಮಕಗೊಂಡಿರುವ ನಿವೃತ್ತ ಮುಖ್ಯ ಎಂಜಿನಿಯರ್‌ಗಳು, ತನಿಖಾ ಕಾರ್ಯಕ್ಕೆ ನೇಮಿಸಿಕೊಂಡಿರುವ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ಗಳು ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಲಿದ್ದಾರೆ.
ಏಳು ಹಂತದ ವಿಂಗಡಣೆ: ಕಾಮಗಾರಿಗಳ ಮೊತ್ತಕ್ಕೆ ಅನುಗುಣವಾಗಿ ಏಳು ಹಂತಗಳಲ್ಲಿ ವಿಂಗಡಿಸಿ ಸ್ಥಳ ತಪಾಸಣೆ ಪಟ್ಟಿ ಸಿದ್ಧಪಡಿಸಲಾಗಿದೆ. ₹ 5 ಲಕ್ಷದವರೆಗೆ, ₹ 5.01 ಲಕ್ಷದಿಂದ ₹ 50 ಲಕ್ಷದವರೆಗೆ, ₹ 50.01 ಲಕ್ಷದಿಂದ ₹ 1 ಕೋಟಿವರೆಗೆ, ₹ 1.01 ಕೋಟಿಯಿಂದ ₹ 5 ಕೋಟಿವರೆಗೆ, ₹ 5.01 ಕೋಟಿಯಿಂದ ₹ 10 ಕೋಟಿವರೆಗೆ, ₹ 10.01 ಕೋಟಿಯಿಂದ ₹ 50 ಕೋಟಿವರೆಗೆ ಮತ್ತು ₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳು ಎಂಬುದಾಗಿ ವರ್ಗೀಕರಿಸಿ ತನಿಖೆ ಆರಂಭಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಆಯೋಗವು ಮಧ್ಯಂತರ ವರದಿ ಸಲ್ಲಿಕೆ ಬಗ್ಗೆ ಯೋಚಿಸಿಲ್ಲ. ವಿಚಾರಣೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವುದಕ್ಕೆ ಆದ್ಯತೆ ನೀಡಲಾಗಿದೆ. ನ್ಯಾ–ಎಚ್.ಎನ್. ನಾಗಮೋಹನದಾಸ್, ವಿಚಾರಣಾ ಆಯೋಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.