ADVERTISEMENT

ಮಹದೇವಪುರ ವಲಯ: 110 ಹಳ್ಳಿಗಳ ರಸ್ತೆ ಕಾಮಗಾರಿಗೆ 4ಜಿ ವಿನಾಯಿತಿ?

ಹೆಚ್ಚುವರಿ ₹119.62 ಕೋಟಿಗೆ ಪ್ರಸ್ತಾವನೆ

ವಿಜಯಕುಮಾರ್ ಎಸ್.ಕೆ.
Published 8 ಡಿಸೆಂಬರ್ 2021, 19:30 IST
Last Updated 8 ಡಿಸೆಂಬರ್ 2021, 19:30 IST
ಮಹದೇವಪುರ ಕ್ಷೇತ್ರದಲ್ಲಿನ 110 ಹಳ್ಳಿ ಯೋಜನೆಯ ಕಾಮಗಾರಿ
ಮಹದೇವಪುರ ಕ್ಷೇತ್ರದಲ್ಲಿನ 110 ಹಳ್ಳಿ ಯೋಜನೆಯ ಕಾಮಗಾರಿ   

ಬೆಂಗಳೂರು: ಬಿಬಿಎಂಪಿಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 110 ಹಳ್ಳಿ ಯೋಜನೆಯಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿಯಾಗಿ ₹119.62 ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಕಾಮಗಾರಿಗಳಿಗೆ 4ಜಿ ವಿನಾಯಿತಿಯನ್ನೂ (ಟೆಂಡರ್‌ ಕರೆಯದೇ ಕಾಮಗಾರಿ ನಿರ್ವಹಿಸುವುದು) ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರವೇ ಅತೀ ಹೆಚ್ಚು 31 ಹಳ್ಳಿಗಳನ್ನು ಒಳಗೊಂಡಿದೆ. ಪ್ರಸಕ್ತ ಸಾಲಿನಲ್ಲಿ 110 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ₹1 ಸಾವಿರ ಕೋಟಿ ಬಿಡುಗಡೆ ಮಾಡಿದ ಸರ್ಕಾರ, ಈ ಕ್ಷೇತ್ರಕ್ಕೆ ₹210 ಕೋಟಿ ಬಿಡುಗಡೆ ಮಾಡಿತು. ಈ ಅನುದಾನದಲ್ಲಿ 114 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಅಂತಿಮ ಹಂತದಲ್ಲಿದೆ.

ಐ.ಟಿ ಕಂಪನಿಗಳ ಬೀಡಾಗಿರುವ ಈ ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, 110 ಹಳ್ಳಿ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗೆ ಅಗೆದಿರುವ ರಸ್ತೆಗಳ ಮರು ನಿರ್ಮಾಣ ಕಾಮಗಾರಿ ಜರೂರಾಗಿ ಆಗಬೇಕಿದೆ. ಹೆಚ್ಚುವರಿಯಾಗಿ ₹78.32 ಕೋಟಿ ಮತ್ತು ₹41.30 ಕೋಟಿ ಅನುದಾನ ಕೋರಿ ಎರಡು ಪ್ರಸ್ತಾವನೆಗಳನ್ನು ಬಿಬಿಎಂಪಿ ಮಹದೇವಪುರ ವಲಯದಿಂದ ಸಲ್ಲಿಸಲಾಗಿದೆ.

ADVERTISEMENT

₹78.32 ಕೋಟಿ ಮೊತ್ತದ ಮೊದಲ ಪ್ರಸ್ತಾವನೆಯಲ್ಲಿ ಕಾಡುಗೋಡಿ, ಹಗದೂರು, ದೊಡ್ಡನೆಕ್ಕುಂದಿ, ಬೆಳ್ಳಂದೂರು, ಹೂಡಿ ಮತ್ತು ವರ್ತೂರು ವಾರ್ಡ್‌ಗಳಲ್ಲಿ ಒಟ್ಟು 73 ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿದೆ. ₹41.30 ಕೋಟಿ ಮೊತ್ತದ ಎರಡನೇ ಪ್ರಸ್ತಾವನೆಯಲ್ಲಿ ಹೂಡಿ, ಕಾಡುಗೋಡಿ, ಹಗದೂರು, ವರ್ತೂರು, ಬೆಳ್ಳಂದೂರು ವಾರ್ಡ್ ವ್ಯಾಪ್ತಿಯಲ್ಲಿ 59 ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುಮೋದನೆಗೆ ಬಾಕಿ ಇದೆ. ಈ ಹೆಚ್ಚುವರಿ ಅನುದಾನದಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ ಎಂಬ ಕಾರಣಕ್ಕೆ 4ಜಿ ವಿನಾಯಿತಿ ಪಡೆಯುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ವಾಹನ ದಟ್ಟಣೆ ಹೆಚ್ಚಿರುವುದರಿಂದ ಮುಂಗಾರು ಪೂರ್ವ ಮಳೆ ಆರಂಭಕ್ಕೂ ಮುನ್ನವೇ ಕಾಮಗಾರಿ ಮುಗಿಸಬೇಕಿದೆ. ಟೆಂಡರ್ ಪ್ರಕ್ರಿಯೆ ನಡೆಸಿದರೆ ಕಾಮಗಾರಿ ವಿಳಂಬವಾಗಲಿದ್ದು, 4ಜಿ ವಿನಾಯಿತಿ ನೀಡಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ.

‘4ಜಿ ವಿನಾಯಿತಿ ಪಡೆದು ಬಿಬಿಎಂಪಿ ಚುನಾವಣೆಗೂ ಮುನ್ನ ತಮ್ಮ ಹಿಂಬಾಲಕರಿಗೆ ತುಂಡು ಗುತ್ತಿಗೆ ಕೊಡಿಸುವ ಉದ್ದೇಶವನ್ನು ಸ್ಥಳೀಯ ಜನಪ್ರತಿನಿಧಿಯೊಬ್ಬರು ಹೊಂದಿದ್ದಾರೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳೇ ಹೇಳುತ್ತಾರೆ.

‘ಮಹದೇವಪುರ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿ ತೊಂದರೆ ಇರುವುದು ನಿಜ. ಹಾಗೆಂದ ಮಾತ್ರಕ್ಕೆ 4ಜಿ ವಿನಾಯಿತಿ ಪಡೆದು ಕಾಮಗಾರಿ ನಡೆಸುವುದು ಒಳ್ಳೆಯ ಸಂಪ್ರದಾಯ ಅಲ್ಲ’ ಎಂಬುದು ಅವರ ಅಭಿಪ್ರಾಯ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕ ಅರವಿಂದ ಲಿಂಬಾವಳಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ‘ಶಾಸಕರು ಬ್ಯುಸಿ ಇದ್ದು, ಪ್ರತಿಕ್ರಿಯೆಗೆ ಗುರುವಾರ ಸಿಗಲಿದ್ದಾರೆ’ ಎಂದು ಅವರ ಆಪ್ತ ಸಿಬ್ಬಂದಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.