ADVERTISEMENT

52 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2011, 19:25 IST
Last Updated 2 ಆಗಸ್ಟ್ 2011, 19:25 IST
52 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
52 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ   

ಬೆಂಗಳೂರು:  ನಕ್ಸಲರ ವಿರುದ್ಧ ಹೋರಾಡಿ ಹುತಾತ್ಮರಾದ ನಕ್ಸಲ್ ವಿರೋಧಿ ಪಡೆಯ ಎಂ.ಎನ್. ಗುರುಪ್ರಸಾದ್, 2004ರಲ್ಲಿ ದಾವಣಗೆರೆ ಕೋಮುಗಲಭೆ ತಡೆದ ಕೆಎಸ್‌ಆರ್‌ಪಿ ಎಜಿಡಿಪಿ ಗೌಸ್ ಮೊಹಮ್ಮದ್ ಹಯಾತ್, ಸೈಬರ್ ಕ್ರೈಂ ಘಟಕ ಸ್ಥಾಪಿಸಲು ಶ್ರಮಿಸಿದ ಹೆಚ್ಚುವರಿ ಡಿಜಿಪಿ ಎಚ್.ಸಿ. ಕಿಶೋರ್‌ಚಂದ್ರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎನ್.ಅಚ್ಯುತ್‌ರಾವ್ ಸೇರಿದಂತೆ 52 ಅಧಿಕಾರಿಗಳಿಗೆ ಮಂಗಳವಾರ ರಾಷ್ಟ್ರಪತಿಯವರ ಶೌರ್ಯ ಪದಕ, ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾಪದಕಗಳನ್ನು ನೀಡಿ ಗೌರವಿಸಲಾಯಿತು.

ದಿ. ಗುರುಪ್ರಸಾದ್ ಅವರ ಕುಟುಂಬ ಸದಸ್ಯರೊಬ್ಬರು ಪದಕ ಸ್ವೀಕರಿಸಲು ರಾಜ್ಯಪಾಲರ ಬಳಿಗೆ ತೆರಳಿದ ದೃಶ್ಯ ಮನಕಲಕುವಂತಿತ್ತು. ಮಹಿಳಾ ಜಾಗೃತಿ ದಳದ ಕುಂದುಕೊರತೆಗಳ ವಿಭಾಗದಲ್ಲಿ ದುಡಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ನೂರ್‌ಜಾನ್ 2010ರ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪಡೆದ ರಾಜ್ಯದ ಏಕೈಕ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಗರದ ರಾಜಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ 2009-10ನೇ ಸಾಲಿನ ರಾಷ್ಟ್ರಪತಿಯವರ ಪದಕ ಪ್ರದಾನ ಮಾಡಿದ  ರಾಜ್ಯಪಾಲ ಎಚ್.ಆರ್.ಭಾರದ್ವಾಜ್,  `ಪೊಲೀಸ್ ಇಲಾಖೆಯ ಉನ್ನತ ಸ್ಥಾನವಾದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ಸರ್ಕಾರ ಏಣಿ-ಶ್ರೇಣಿಗೆ ಮಾನ್ಯತೆ ನೀಡಲಿಲ್ಲ. ಒಬ್ಬ ಹಿರಿಯ ಅಧಿಕಾರಿಗೆ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡದಿದ್ದರೆ ಹೇಗೆ?~ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

`ದೇಶದಲ್ಲಿಯೇ ರಾಜ್ಯದ ಪೊಲೀಸರಿಗೆ ಉತ್ತಮ ಹೆಸರಿದೆ. ಆದರೆ ಕಳೆದ ಒಂದೆರಡು ವರ್ಷಗಳಿಂದ ಈ ವರ್ಚಸ್ಸು ಕಳೆಗುಂದಿದೆ. ಪೊಲೀಸ್ ಅಧಿಕಾರಿಗಳು ನಿಯಮಗಳ ಪ್ರಕಾರ ಅಧಿಕಾರ ಚಲಾಯಿಸಬೇಕು. ಅವರ ಮುಂದಿರುವ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು~ ಎಂದು ಕರೆ ನೀಡಿದರು.

ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮ್‌ದಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎನ್.ಅಚ್ಯುತರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ,ಮತ್ತಿತರರು ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.