ADVERTISEMENT

ಗಾಂಧೀಜಿ ಪ್ರತಿಮೆಯನ್ನು ಮರೆಮಾಚಲಿರುವ ಸ್ಕೈವಾಕ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:33 IST
Last Updated 5 ಜನವರಿ 2018, 19:33 IST
ಗಾಂಧೀಜಿ ಪ್ರತಿಮೆಯನ್ನು ಮರೆಮಾಚಲಿರುವ ಸ್ಕೈವಾಕ್‌
ಗಾಂಧೀಜಿ ಪ್ರತಿಮೆಯನ್ನು ಮರೆಮಾಚಲಿರುವ ಸ್ಕೈವಾಕ್‌   

ಬೆಂಗಳೂರು: ನಗರದ ಪ್ರಸಿದ್ಧ ಪಾರಂಪರಿಕ ತಾಣಗಳಲ್ಲಿ ಒಂದಾದ ಮಹಾತ್ಮ ಗಾಂಧಿ ವೃತ್ತದ ಬಳಿ ಸಂಯೋಜಿತ ಸ್ಕೈವಾಕ್‌ ನಿರ್ಮಿಸಲು ಬಿಬಿಎಂಪಿ ಮುಂದಾಗಿದ್ದು, ಇದರ ತಳಪಾಯದ ಕಾಮಗಾರಿ ಪ್ರಗತಿಯಲ್ಲಿದೆ.

ಈ ಕಾಮಗಾರಿ ಪೂರ್ಣಗೊಂಡ ಬಳಿಕ ಮಹಾತ್ಮ ಗಾಂಧಿ ಹಾಗೂ ಕ್ವೀನ್ಸ್‌ ಪ್ರತಿಮೆಯ ಸೌಂದರ್ಯ ಮಸುಕಾಗಲಿದೆ. ಕಬ್ಬನ್‌ ಉದ್ಯಾನದ ಪಕ್ಕದಲ್ಲಿರುವ ಈ ವೃತ್ತದಲ್ಲಿ ಕಂಗೊಳಿಸುವ ಹಸಿರಿನ ಸೊಬಗು ಕೂಡ ನಶಿಸಲಿದೆ. ಈ ಯೋಜನೆ ’ದೃಶ್ಯ ಮಾಲಿನ್ಯ’ಕ್ಕೆ ಕಾರಣವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಹಕ್ಕಿನಡಿ ಪಡೆದ ಸಂಯೋಜಿತ ಸ್ಕೈವಾಕ್‌ನ ವಿನ್ಯಾಸದ ದಾಖಲೆಗಳ ಪ್ರಕಾರ, ಇದರ ಒಂದು ಪಾದಚಾರಿ ಮೇಲ್ಸೇತುವೆ ಮಹಾತ್ಮ ಗಾಂಧಿ ಉದ್ಯಾನದ ಬಳಿಯ ಪಾದಚಾರಿ ಮಾರ್ಗದಿಂದ ಆರಂಭವಾಗಿ ಎಂ.ಜಿ.ರಸ್ತೆಯನ್ನು ಅಡ್ಡಹಾಯ್ದು ಸೇಂಟ್‌ ಮಾರ್ಕ್‌ ಚರ್ಚ್‌ನ ಬಳಿ ಮುಕ್ತಾಯವಾಗಲಿದೆ. ಇನ್ನೊಂದು ಮೇಲ್ಸೇತುವೆಯು ಚಿನ್ನಸ್ವಾಮಿ ‌ಕ್ರೀಡಾಂಗಣದ ದ್ವಾರದ ಬಳಿಯಿಂದ ಆರಂಭವಾಗಿ ಕಬ್ಬನ್‌ ಉದ್ಯಾನದ ಮೂಲೆಯಲ್ಲಿ ಕೊನೆಗೊಳ್ಳಲಿದೆ.

ADVERTISEMENT

ಇನ್‌ಫ್ರಾ ಸಪೋರ್ಟ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಒದಗಿಸಿರುವ ರಸ್ತೆ ಮತ್ತು ಪಾದಚಾರಿ ಮಾರ್ಗದ ವಿನ್ಯಾಸಕ್ಕೆ ಅನುಗುಣವಾಗಿ ಈ ಕಾಮಗಾರಿಗೆ ನೀಲನಕಾಶೆಯನ್ನು ಸಿದ್ಧಪಡಿಸಲಾಗಿದೆ. ಯೋಜನೆಗೆ ವಿಶೇಷ ಸಲಹೆಗಾರರನ್ನಾಗಿ ಈ ಕಂಪೆನಿಯನ್ನು ನೇಮಿಸಿಕೊಳ್ಳಲಾಗಿದೆ.

‘ಈ ಕಾಮಗಾರಿ ದೊಡ್ಡ ದುರಂತ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು (ಸಿಎಫ್‌ಬಿ) ಸಂಘಟನೆಯು ಬಣ್ಣಿಸಿದೆ. ನಗರದಲ್ಲಿ ಈಗಾಗಲೇ ನಿರ್ಮಿಸಿರುವ ಸ್ಕೈವಾಕ್‌ಗಳೇ ಬಳಕೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಇಂತಹ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶವಾದರೂ ಏನು ಎಂದು ಸಂಘಟನೆ ಪ್ರಶ್ನಿಸಿದೆ.

‘ನಗರದ ಅನೇಕ ಕಡೆ ಸ್ಕೈವಾಕ್‌ಗಳು ರಾಜಕಾರಣಿಗಳು ಹಾಗೂ ಶಾಸಕರ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಅನಧಿಕೃತವಾಗಿ ಕಟ್ಟುವ ಬ್ಯಾನರ್‌ಗಳ ಕೆಟ್ಟ ಚೌಕಟ್ಟುಗಳಾಗಿ ಬಳಕೆಯಾಗುತ್ತಿವೆ. ಅವುಗಳಿಂದ ಬೇರಾವುದೇ ಪ್ರಯೋಜನ ಆಗುತ್ತಿಲ್ಲ’ ಎಂದು ಸಿಎಫ್‌ಬಿಯ ಶ್ರೀನಿವಾಸ ಅಲವಿಲ್ಲಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ನಗರದಲ್ಲಿ ಪಾದಚಾರಿಗಳನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಪರಿಗಣಿಸಲಾಗುತ್ತಿದೆ. ಜಂಕ್ಷನ್‌ ಬಳಿ ನೇರವಾಗಿ ರಸ್ತೆ ದಾಟಲು ಅವಕಾಶ ಇದ್ದರೂ ಅವರು ಹತ್ತಿ ಇಳಿಯುವಂತೆ ಬಲವಂತ ಮಾಡಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.

ಈ ಸ್ಕೈವಾಕ್‌ ಯಾವ ರೀತಿ ಇರಬೇಕು ಎಂಬ ವಿನ್ಯಾಸವನ್ನು ಟೆಂಡರ್‌ಶ್ಯೂರ್‌ ಗುಣಮಟ್ಟದಲ್ಲೇ ರೂಪಿಸಲಾಗಿದೆ. ಕಾಮಗಾರಿಗಾಗಿ ಮಣ್ಣು ಪರೀಕ್ಷೆ ಹಾಗೂ ಮೇಲ್ಮೈ ಲಕ್ಷಣಗಳ ಸರ್ವೆಯನ್ನು 2017ರ ಏಪ್ರಿಲ್‌ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಇಲ್ಲಿ ಕಂಬಗಳ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭವಾಗಿದೆ. ಗಾಂಧಿಪಾರ್ಕ್‌ ಬಳಿ ಲಿಫ್ಟ್‌ ಗೋಪುರದ ಕೆಲಸ ಮುಕ್ತಾಯದ ಹಂತ ತಲುಪಿದೆ.

ಖಾಸಗಿ ಸಹಭಾಗಿತ್ವದಡಿ ನಿರ್ಮಾಣಗೊಳ್ಳುತ್ತಿರುವ ಈ ಪಾದಚಾರಿ ಮೇಲ್ಸೇತುವೆಗೆ ವಿನ್ಯಾಸ ರೂಪಿಸುವುದು, ನಿರ್ಮಿಸುವುದು, ಬಂಡವಾಳ ಹೂಡುವುದು ಹಾಗೂ ನಿರ್ವಹಣೆಯ ಹೊಣೆ ಗುತ್ತಿಗೆ ಪಡೆದ ಸಂಸ್ಥೆಯದ್ದೇ ಆಗಿರುತ್ತದೆ.

ಆರಂಭದಲ್ಲಿ ಅನಿಲ್‌ ಕುಂಬ್ಳೆ ವೃತ್ತದ ಬಳಿ ಇಂಗ್ಲಿಷ್‌ ಅಕ್ಷರ ‘ಎಲ್‌’ ಆಕಾರದ ಸ್ಕೈವಾಕ್‌ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಸೇಂಟ್‌ ಮಾರ್ಕ್ಸ್‌ ರಸ್ತೆ ಹಾಗೂ ಎಂ.ಜಿ ರಸ್ತೆಯನ್ನು ಇದು ಅಡ್ಡಹಾಯುತ್ತಿತ್ತು. ಅಲ್ಲೇ ಸ್ಕೈವಾಕ್‌ ನಿರ್ಮಾಣವಾಗುತ್ತಿದ್ದರೆ ಅಲ್ಲಿನ ಓರಿಯಂಟಲ್‌ ಬಿಲ್ಡಿಂಗ್‌ (ಎಲ್‌ಐಸಿ ಕಚೇರಿಯ ಇದೇ ಕಟ್ಟಡದಲ್ಲಿದೆ) ಪಾರಂಪರಿಕ ಕಟ್ಟಡದ ಸೌಂದರ್ಯಕ್ಕೆ ಅಡ್ಡಿ ಉಂಟಾಗುತ್ತಿತ್ತು.

‘ಎರಡು ಪ್ರಮುಖ ರಸ್ತೆಗಳಿಗೆ ಕಾಣಿಸಲಿದೆ ಜಾಹೀರಾತು’
ಈ ಸ್ಕೈವಾಕ್‌ನಲ್ಲಿರುವ ಜಾಹೀರಾತು ಎಂ.ಜಿ. ರಸ್ತೆ ಹಾಗೂ ಕ್ವೀನ್ಸ್‌ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಸ್ಪಷ್ಟವಾಗಿ ಕಾಣಿಸುವಂತಿರಬೇಕು ಎಂಬ ರೀತಿ ಇದರ ವಿನ್ಯಾಸ ರೂಪಿಸಲಾಗಿದೆ.

‘ಇದರಲ್ಲಿನ ಜಾಹೀರಾತು ಫಲಕಗಳು ಎರಡು ಪ್ರಮುಖ ರಸ್ತೆಗಳಿಗೆ ಕಾಣಿಸುತ್ತವೆ’ ಎಂದು ಯೋಜನೆಯ ನೀಲಿನಕಾಶೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಈ ಪಾದಚಾರಿ ಮೇಲ್ಸೇತುವೆಯ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಸ್ಕೈವಾಕ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸ್ಕೈವಾಕ್‌ ನಿರ್ಮಾಣಗೊಳ್ಳುತ್ತಿದ್ದಂತೆಯೇ ಈ ಪ್ರದೇಶದ ಅಷ್ಟೂ ಸೊಬಗು‌ ಕಣ್ಮರೆ ಆಗಲಿದೆ. ಎಂ.ಜಿ. ರಸ್ತೆಯ ಮುಕುಟಮಣಿಯಂತಿರುವ ಹಾಗೂ ಕಬ್ಬನ್‌ ಉದ್ಯಾನದ ಪ್ರವೇಶ ದ್ವಾರದಂತಿರುವ ಈ ಚೆಂದದ ವೃತ್ತವನ್ನು ಉಳಿಸಿಕೊಳ್ಳಲು ಕೈಜೋಡಿಸೋಣ’ ಎಂದು ಶ್ರೀನಿವಾಸರಾಜು ಎಂಬುವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಉಕ್ಕಿನ ಸೇತುವೆ ವಿರುದ್ಧ ಹಾಗೂ ಲಾಲ್‌ಬಾಗ್‌ ಕೃಂಬಿಗಲ್‌ ಸಭಾಂಗಣವನ್ನು ನೆಲಸಮ ಮಾಡುವುದರ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಮುಖರು ಈ ಸ್ಕೈವಾಕ್‌ ವಿರುದ್ಧದ ಈ ಬರಹವನ್ನು ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

‘ನಗರದ ಈ ಮನೋಹರ ತಾಣವನ್ನು ಹೀಗೆಯೇ ಉಳಿಸಿಕೊಳ್ಳಬೇಕು. ಎಂ.ಜಿ. ರಸ್ತೆಯ ಸೊಬಗಿನ ತಾಣಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಈ ಹಿಂದೆ ಮಾಡಿರುವ ತಪ್ಪು ಮರುಕಳಿಸುವುದು ಬೇಡ’ ಎಂಬ ಸಂದೇಶವನ್ನೂ ಶೇರ್‌ ಮಾಡುತ್ತಿದ್ದಾರೆ.

ಸಸ್ಯವಿಜ್ಞಾನಿ ಕೃಂಬಿಗಲ್‌ ಅವರ ಮೊಮ್ಮಗಳು ಅಲಿಯಾ ಫೆಲ್ಪ್ಸ್‌ ಅವರೂ ಈ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ.

‘ಪ್ರತಿ ಸಮುದಾಯವೂ ಬೆಲೆಕಟ್ಟಲಾಗದ ಪರಂಪರೆಯನ್ನು ಹೊಂದಿರುತ್ತದೆ. ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಾಗರಿಕ ಸಮುದಾಯದ ಕರ್ತವ್ಯ. ಕೃಂಬಿಗಲ್‌ ಸಭಾಂಗಣಕ್ಕೆ ಒದಗಿದ ಪರಿಸ್ಥಿತಿ ಈ ವೃತ್ತಕ್ಕೂ ಬರುವುದು ಬೇಡ. ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಅವರು ಹೇಳಿದರು.

‘ಇದು ಇನ್ನೊಂದು ವಿಕೃತಿ ಆಗಲಿದೆ. ಇದರಿಂದ  ಜಾಹೀರಾತುದಾರರಿಗೆ ಮಾತ್ರ ಪ್ರಯೋಜನ. ಈ ಪಾದಚಾರಿ ಮೇಲ್ಸೇತುವೆಯಿಂದ ಯಾವೆಲ್ಲ ಪಾದಚಾರಿಗಳಿಗೆ ಅನುಕೂಲವಾಗುತ್ತದೆ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀಧರ ಪಬ್ಬಿಸೆಟ್ಟಿ.

ವಿವರ ಕೇಳಿದ ಜಾರ್ಜ್‌
ಬೆಂಗಳೂರು:
ಸ್ಕೈವಾಕ್‌ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆಯ ವಿವರ ನೀಡುವಂತೆ ಬಿಬಿಎಂಪಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸೂಚಿಸಿದ್ದಾರೆ.

‘ಸ್ಕೈವಾಕ್‌ನ ವಿನ್ಯಾಸ, ವೆಚ್ಚ ಸೇರಿ ಪೂರ್ಣ ವಿವರವನ್ನು ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ. ಅವರು ನೀಡುವ ಆದೇಶದ ಅನ್ವಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.