ADVERTISEMENT

ಸಿನಿಮಾ ನಿರ್ಮಾಣ: ಪರಿಶಿಷ್ಟರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ಸಿನಿಮಾ ನಿರ್ಮಾಣ: ಪರಿಶಿಷ್ಟರಿಗೆ ತರಬೇತಿ
ಸಿನಿಮಾ ನಿರ್ಮಾಣ: ಪರಿಶಿಷ್ಟರಿಗೆ ತರಬೇತಿ   

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣದ ಉಚಿತ ತರಬೇತಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

55 ಅಭ್ಯರ್ಥಿಗಳಿಗೆ 40 ದಿನಗಳವರೆಗೆ ತರಬೇತಿ ನೀಡಲಾಗುತ್ತದೆ. ವಸತಿ, ಊಟ ವ್ಯವಸ್ಥೆ ಮಾಡಲಾಗುತ್ತದೆ. ಸಿನಿಮಾ ನಿರ್ಮಾಣ, ನಿರ್ದೇಶನ, ಅಭಿನಯ, ಸಾಹಿತ್ಯ, ಸಂಗೀತ ಹಾಗೂ ಛಾಯಾಗ್ರಹಣದ ಬಗ್ಗೆ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಶಿಬಿರಾರ್ಥಿಗಳಿಂದ ಕಿರುಚಿತ್ರ ನಿರ್ಮಿಸಲು ಪ್ರೋತ್ಸಾಹಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಅಕಾಡೆಮಿಯಿಂದ ಪ್ರಮಾಣಪತ್ರ ನೀಡಲಾಗುತ್ತದೆ.

ಕಾರ್ಯಾಗಾರ ಉದ್ಘಾಟಿಸಿದ ಅಕಾಡೆಮಿಯ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ‘ನಟನೆ, ನಿರ್ದೇಶನದ ಕಲಿಸುವ ಸಂಸ್ಥೆಗಳು ಹಾದಿ ಬೀದಿಯಲ್ಲಿ  ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಇಂತಹ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಂದ ಎರಡು– ಮೂರು ಲಕ್ಷ ರೂಪಾಯಿ ವಸೂಲಿ ಮಾಡುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿ ತರಬೇತಿ ಪಡೆದ ನಂತರವೂ ಅವರ ಬದುಕು ಅತಂತ್ರವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಬಹುತೇಕರು ನಟರಾಗಬೇಕು ಎಂಬ ಇಚ್ಛೆ ಹೊಂದಿರುತ್ತಾರೆ. ಆದರೆ, ಚಲನಚಿತ್ರವು ನಟರಿಂದ ಮಾತ್ರ ಸಿದ್ಧವಾಗುವುದಿಲ್ಲ. 22 ವಿಭಾಗಗಳ ತಂತ್ರಜ್ಞರ ಫಲವಾಗಿ ಒಂದು ಚಲನಚಿತ್ರ ನಿರ್ಮಾಣವಾಗುತ್ತದೆ. ಈ ವಿಭಾಗಗಳಲ್ಲಿ ಕೆಲಸ ಮಾಡಲು ಹೇರಳ ಅವಕಾಶಗಳಿವೆ ಎಂದರು.‌

ಚಿತ್ರ ವಿಮರ್ಶಕ ಎನ್‌.ವಿದ್ಯಾಶಂಕರ್‌, ‘ಸಮಾನತೆ ಹಾಗೂ ವೈಯಕ್ತಿಕ ಹಕ್ಕುಗಳ ಅನುಷ್ಠಾನದಲ್ಲಿ ಸೋತಿದ್ದೇವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ, ವಸಾಹತುಶಾಹಿ ಪೂರ್ವದ ದಿನಗಳಿಗೆ ಹೋಗುತ್ತಿದ್ದೇವೆ ಎನಿಸುತ್ತಿದೆ. ಆಧುನಿಕ ದೃಶ್ಯ ಮಾಧ್ಯಮ ಜಗತ್ತನ್ನು ಆಳುತ್ತಿದೆ. ಈ ಮಾಧ್ಯಮದಲ್ಲಿ ಎಲ್ಲರಿಗೂ ಸಮಾನ
ಅವಕಾಶಗಳು ಸಿಗಬೇಕು. ತಳಸಮುದಾಯದ ಪ್ರತಿಭೆಗಳು ಈ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.