ADVERTISEMENT

ಬಿಸಿಯೂಟದ ಜೊತೆ ‘ಸಿರಿಧಾನ್ಯ’

ಅಕ್ಷಯಪಾತ್ರೆ ಪ್ರತಿಷ್ಠಾನದಿಂದ ಹತ್ತು ಶಾಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:33 IST
Last Updated 12 ಜನವರಿ 2018, 19:33 IST
ಬಿಸಿಯೂಟದ ಜೊತೆ ‘ಸಿರಿಧಾನ್ಯ’
ಬಿಸಿಯೂಟದ ಜೊತೆ ‘ಸಿರಿಧಾನ್ಯ’   

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪೂರೈಸುವ ಪ್ರಾಯೋಗಿಕ ಕಾರ್ಯಕ್ರಮವನ್ನು ಅಕ್ಷಯಪಾತ್ರ ಪ್ರತಿಷ್ಠಾನ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿ 10 ಶಾಲೆಗಳ ಒಟ್ಟು 1,622 ಮಕ್ಕಳಿಗೆ ಪ್ರತಿಷ್ಠಾನ ಮೂರು ತಿಂಗಳು ಸಿರಿಧಾನ್ಯದ ಅಡುಗೆ ಪೂರೈಸಲಿದೆ.

‘ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಅಂತರರಾಷ್ಟ್ರೀಯ ಒಣ ಪ್ರದೇಶದ ಬೆಳೆ ಸಂಶೋಧನಾ ಸಂಸ್ಥೆ (ಇಕ್ರಿಸ್ಯಾಟ್) ಸಹಯೋಗದೊಂದಿಗೆ ಈ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದೇವೆ. ವಾರದಲ್ಲಿ ಎರಡು ದಿನ ಬಿಸಿಯೂಟದ ಜೊತೆಗೆ ಸಿರಿಧಾನ್ಯದ ಆಹಾರ ನೀಡಲಾಗುತ್ತದೆ’ ಎಂದು ಅಕ್ಷಯಪಾತ್ರದ ಉಪಾಧ್ಯಕ್ಷ ಚಂಚಲಪತಿ ದಾಸ ತಿಳಿಸಿದರು.

ADVERTISEMENT

ಕೃಷ್ಣ ಬೈರೇಗೌಡ, ‘ಈ ಕಾರ್ಯಕ್ರಮದಲ್ಲಿ ಸರ್ಕಾರದ ಪಾತ್ರವೇನಿಲ್ಲ. ಪ್ರತಿಷ್ಠಾನ ನೀಡುವ ವರದಿಯನ್ನು ಆಧರಿಸಿ, ಸಿರಿಧಾನ್ಯಗಳನ್ನು ಬಿಸಿಯೂಟದಲ್ಲಿ ಸೇರಿಸುವ ಬಗ್ಗೆ ಕ್ರಮಕೈಗೊಳ್ಳುತ್ತೇವೆ’ ಎಂದರು. ‘ಸಿರಿಧಾನ್ಯ ಬೆಳೆಯುವ ರೈತರ ವಿವರಗಳನ್ನು ಪ್ರತಿಷ್ಠಾನದವರಿಗೆ ಒದಗಿಸುತ್ತೇವೆ. ಅವರು ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನು ಖರೀದಿಸಬಹುದು’ ಎಂದರು.

***

* ರಾಜ್ಯದಲ್ಲಿ 45 ಲಕ್ಷ ಎಕರೆಯಲ್ಲಿ ಪ್ರಮುಖ ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ ಧಾನ್ಯಗಳನ್ನು ಬೆಳೆಯಲಾಗುತ್ತಿದೆ.

* ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮುಖ ಸಿರಿಧಾನ್ಯಗಳನ್ನು ಬೆಳೆಯುವ ಪ್ರಮಾಣ ಶೇ 10ರಷ್ಟು ಹೆಚ್ಚಾಗಿದೆ.

* 1.05 ಲಕ್ಷ ಎಕರೆಯಲ್ಲಿ ನವಣೆ, ಅರ್ಕ, ಸಾಮೆ, ಬರಗು ಧಾನ್ಯಗಳನ್ನು ಬೆಳೆಯಲಾಗುತ್ತಿದೆ.

* ಕಿರಿಧಾನ್ಯಗಳನ್ನು ಬೆಳೆಯುವ ಪ್ರಮಾಣವೂ ಹಿಂದಿನ ವರ್ಷಕ್ಕೆ (50 ಸಾವಿರ ಎಕರೆ) ಹೋಲಿಸಿದರೆ ದುಪ್ಪಟ್ಟಾಗಿದೆ.

* ಸಿರಿಧಾನ್ಯಗಳ ಉತ್ಪಾದನೆ ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ ₹ 34 ಕೋಟಿಯ ವಿಶೇಷ ಪ್ಯಾಕೇಜ್‌ ಒದಗಿಸಿದೆ.

***

ಸಿರಿಧಾನ್ಯದ ಅಡುಗೆಗಳು

* ಜೋಳದ ಉಪ್ಪಿಟ್ಟು

* ಬರಗು ಬಿಸಿಬೇಳೆಬಾತ್‌

* ನವಣೆಯ ತೆಂಗಿನ ರೈಸ್‌ಬಾತ್‌

* ಜೋಳದ ಪೊಂಗಲ್‌

* ನವಣೆಯ ಪಲಾವ್‌

***

ಈಗ ನೀಡುವ ಬಿಸಿಯೂಟ ಚೆನ್ನಾಗಿದೆ. ಸಿರಿಧಾನ್ಯದ ಆಹಾರವೂ ರುಚಿ ರುಚಿಯಾಗಿತ್ತು
ರಂಚಿತಾ, 7ನೇ ತರಗತಿ

***

ಮೂರು ದಿನಗಳು ಸಿರಿಧಾನ್ಯದ ತಿಂಡಿ ನೀಡಿದರು. ನನಗೆ ನವಣೆ ಪಲಾವ್‌ ಬಹಳ ಇಷ್ಟ ಆಯ್ತು
–ಚೇತನ್‌, 6ನೇ ತರಗತಿ

***

ನಮ್ಮಮನೆಯಲ್ಲಿ ಅನ್ನದಲ್ಲಿ ಮಾಡಿದ ಪೊಂಗಲ್‌ಗಿಂತ, ಜೋಳದ ಪೊಂಗಲ್‌ ರುಚಿಕರವಾಗಿತ್ತು
–ಚಿನ್ನ, 6ನೇ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.