ADVERTISEMENT

ಇನ್‌ಸ್ಪೆಕ್ಟರ್‌ ಪತ್ನಿ ಸೇರಿ ಆರು ಮಂದಿಯ ಸರಗಳವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 20:07 IST
Last Updated 15 ಜನವರಿ 2018, 20:07 IST

ಬೆಂಗಳೂರು: ನಗರದಲ್ಲಿ ಸೋಮವಾರ ಸಂಕ್ರಾಂತಿ ಹಬ್ಬದಂದೇ ದುಷ್ಕರ್ಮಿಗಳು, ಪೊಲೀಸ್‌ ಇನ್‌ಸ್ಪೆಕ್ಟರ್‌ ಪತ್ನಿ ಸೇರಿದಂತೆ ಆರು ಮಹಿಳೆಯರ ಸರಗಳನ್ನು ಕಿತ್ತೊಯ್ದಿದ್ದಾರೆ.‌ ಕೆಲ ಮಹಿಳೆಯರನ್ನು ರಸ್ತೆಯಲ್ಲೇ ಎಳೆದೊಯ್ದು ಕ್ರೂರವಾಗಿ ವರ್ತಿಸಿದ್ದಾರೆ.

ಪೀಣ್ಯ, ಬಾಗಲಗುಂಟೆ ಠಾಣೆಯಲ್ಲಿ ತಲಾ 2 ಹಾಗೂ ಕಾಮಾಕ್ಷಿಪಾಳ್ಯ ಮತ್ತು ಬ್ಯಾಡರಹಳ್ಳಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಪೀಣ್ಯ ಬಳಿಯ ಎಚ್‌.ಎಂ.ಟಿ ಬಡಾವಣೆಯಲ್ಲಿ ವಾಸವಿರುವ ಡಿಜಿಪಿ ಕಚೇರಿಯ ಇನ್‌ಸ್ಪೆಕ್ಟರ್‌ ಕೆಂಚೇಗೌಡ ಅವರ ಪತ್ನಿ ಗಂಗಮ್ಮ, ಬೆಳಿಗ್ಗೆ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ನೀರು ಹಾಕುತ್ತಿದ್ದರು. ದೂರದಲ್ಲಿ ಬೈಕ್‌ ನಿಲ್ಲಿಸಿದ್ದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬ, ನಡೆದುಕೊಂಡು ಮನೆಯ ಗೇಟ್‌ ಮೂಲಕ ಒಳಗೆ ಬಂದಿದ್ದ. ಗಂಗಮ್ಮ ಕೊರಳಿಗೆ ಕೈ ಹಾಕಿ, ರಸ್ತೆಯವರೆಗೆ ಎಳೆದೊಯ್ದು ಚಿನ್ನದ ಸರವನ್ನು ಕಿತ್ತುಕೊಂಡು ಕಾಲ್ಕಿತ್ತಿದ್ದಾನೆ. ಪತ್ನಿಯ ಕಿರುಚಾಟ ಕೇಳಿ ಮನೆಯಿಂದ ಹೊರಬಂದ ಕೆಂಚೇಗೌಡ, ದುಷ್ಕರ್ಮಿಗಳನ್ನು ಹಿಡಿಯಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ADVERTISEMENT

‘ಕ್ಯಾಪ್‌ ಹಾಕಿಕೊಂಡಿದ್ದ ದುಷ್ಕರ್ಮಿ, ಏಕಾಏಕಿ ಗಂಗಮ್ಮ ಕೊರಳಿಗೆ ಕೈ ಹಾಕಿದ್ದ. ಅದಕ್ಕೆ ಅವರು ವಿರೋಧವೊಡ್ಡಿದ್ದರೂ ಬಿಟ್ಟಿಲ್ಲ. ಕೆಳಗೆ ಬೀಳಿಸಿ ಸರವನ್ನು ಕಿತ್ತೊಯ್ದಿದ್ದಾನೆ. ದುಷ್ಕರ್ಮಿಯ ಕೃತ್ಯವು ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೀಣ್ಯ ಪೊಲೀಸರು ತಿಳಿಸಿದರು.

ಇದಾದ ಕೆಲವೇ ನಿಮಿಷಗಳಲ್ಲಿ ಪೀಣ್ಯ ಬಳಿ ಮತ್ತೊಬ್ಬ ಮಹಿಳೆಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ. ಆ ಮಹಿಳೆಯು ದೇವಸ್ಥಾನಕ್ಕೆ ಹೊರಟಿದ್ದಾಗ ಈ ಘಟನೆ ನಡೆದಿದೆ.

ವಿಳಾಸ ಕೇಳುವ ನೆಪದಲ್ಲಿ ಕೃತ್ಯ:

ಬಾಗಲಗುಂಟೆಯ ಬೃಂದಾವನ ಲೇಔಟ್‌ ನಿವಾಸಿ ಸೌಗಂಧಿಕಾ, ಬೆಳಿಗ್ಗೆ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದರು. ಬೈಕ್‌ನಲ್ಲಿ ಬಂದಿದ್ದ ಇಬ್ಬರು, ಚೀಟಿಯೊಂದನ್ನು ತೋರಿಸಿ ವಿಳಾಸ ಕೇಳಿದ್ದರು. ಚೀಟಿ ನೋಡುತ್ತಿದ್ದಾಗಲೇ ದುಷ್ಕರ್ಮಿಗಳು ಸರ ಕಿತ್ತುಕೊಂಡು ಹೋಗಿದ್ದಾರೆ.

‘42 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ ಎಂದು ಸೌಗಂಧಿಕಾ ದೂರು ನೀಡಿದ್ದಾರೆ. ಇದಾದ ಕೆಲ ನಿಮಿಷಗಳಲ್ಲಿ ಆರೋಪಿಗಳು ಮತ್ತೊಬ್ಬ ಮಹಿಳೆಯ ಸರವನ್ನು ಕಿತ್ತೊಯ್ದಿದ್ದಾರೆ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.

ರಸ್ತೆಯಲ್ಲಿ ಎಳೆದೊಯ್ದ ದುಷ್ಕರ್ಮಿಗಳು:

ಪೀಣ್ಯದಲ್ಲಿ ಸರ ಕಳ್ಳತನಕ್ಕೆ ಯತ್ನಿಸಿದ್ದ ದುಷ್ಕರ್ಮಿಗಳು, ಶಾರದಮ್ಮ ಎಂಬುವರನ್ನು ರಸ್ತೆಯಲ್ಲೇ ಎಳೆದಾಡಿದ್ದಾರೆ.

ಮನೆಯ ಬಳಿ ನೀರು ತರಲು ಬಂದಿದ್ದ ಮಹಿಳೆಯ ಹತ್ತಿರ ಬಂದಿದ್ದ ದುಷ್ಕರ್ಮಿ, ಕೊರಳಿಗೆ ಕೈ ಹಾಕಿದ್ದ.  ಶಾರದಮ್ಮ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ದುಷ್ಕರ್ಮಿ ಎಷ್ಟೇ ಪ್ರಯತ್ನಿಸಿದರೂ ಸರ ಕಿತ್ತೊಯ್ಯಲು ಆಗಿರಲಿಲ್ಲ. ಹೀಗಾಗಿ ಶಾರದಮ್ಮ ಅವರನ್ನೇ ಎಳೆದುಕೊಂಡು ಹೋಗಿದ್ದ.

‘ಕೂಗಾಟ ಕೇಳಿ ಪತಿ ಹನುಮಂತಪ್ಪ ಹಾಗೂ ಸ್ಥಳೀಯರು ಸಹಾಯಕ್ಕೆ ಬಂದಿದ್ದರು. ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಇರಾನಿ ಗ್ಯಾಂಗ್‌ ಕೃತ್ಯ ಶಂಕೆ

ಸರ ಕಳ್ಳತನವನ್ನು ಇರಾನಿ ಗ್ಯಾಂಗ್‌ ಸದಸ್ಯರು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಸೂಚನೆ ನೀಡಿದ್ದಾರೆ.

‘ನಸುಕಿನಲ್ಲಿ ನಗರದ ಸುತ್ತಮುತ್ತ ನಾಕಾಬಂದಿ ಬಿಗಿಗೊಳಿಸಬೇಕು. ರಾತ್ರಿ ಗಸ್ತು ಕಡ್ಡಾಯವಾಗಿ ಮಾಡಬೇಕು. ಅನುಮಾನ ಬಂದ ವ್ಯಕ್ತಿಗಳನ್ನು ವಶಕ್ಕೆ ವಿಚಾರಣೆ ನಡೆಸಬೇಕು. ಮಹಿಳೆಯರು ಬೆಳಿಗ್ಗೆ ಮನೆ ಸ್ವಚ್ಛಗೊಳಿಸುವ ವೇಳೆಯಲ್ಲೇ ದುಷ್ಕರ್ಮಿಗಳು ಕೃತ್ಯ ಎಸಗುತ್ತಿದ್ದು, ಅಂಥ ಸ್ಥಳಗಳ ಬಗ್ಗೆ ನಿಗಾ ವಹಿಸಬೇಕು’ ಎಂದು ಕಮಿಷನರ್‌ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.