ADVERTISEMENT

ಬಂದ್‌ಗೆ ಮೌನವೇ ಉತ್ತರ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:33 IST
Last Updated 1 ಫೆಬ್ರುವರಿ 2018, 19:33 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ‘ಬೆಂಗಳೂರು ಬಂದ್‌’ ಮೂಲಕ ಅಡ್ಡಿ ಮಾಡಲು ರಾಜ್ಯ ಸರ್ಕಾರ ವಾಟಾಳ್‌ ನಾಗರಾಜ್‌ ಅವರನ್ನು ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.

ಬೆಂಗಳೂರು ಬಂದ್‌ಗೆ ಮೌನವೇ ಉತ್ತರ. ಯಾವುದೇ ಕಾರಣಕ್ಕೂ ಪತ್ರಿಭಟನಾಕಾರರು ಮತ್ತು ಪೊಲೀಸರ ಪ್ರಚೋದನೆಗೆ ಒಳಗಾಗುವುದಿಲ್ಲ. ಏನೇ ಮಾಡಿದರೂ ತಾಳ್ಮೆ ವಹಿಸುವ ಮೂಲಕ ಕಾರ್ಯಕ್ರಮ ಯಶಸ್ಸುಗೊಳಿಸಲಾಗುವುದು ಎಂದು ಬಿಜೆಪಿ ಉಪಾಧ್ಯಕ್ಷ ಆರ್‌.ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜನ ಅರಮನೆ ಮೈದಾನಕ್ಕೆ ಬರುವುದನ್ನು ತಡೆಯಲು ಸಿದ್ದರಾಮಯ್ಯ ಕುತಂತ್ರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಉದ್ಘಾಟನೆ ಕಾರ್ಯಕ್ರಮದ ಸಂದರ್ಭವೂ ನಗರದೆಲ್ಲೆಡೆ ಟ್ರಾಫಿಕ್‌ ಜಾಮ್‌ ಮಾಡಿ ಜನ ಸಮಾವೇಶದ ಸ್ಥಳ ತಲುಪದಂತೆ ನೋಡಿಕೊಂಡರು. ಈ ಬಾರಿ ಅವರ ಕುತಂತ್ರ ನಡೆಯುವುದಿಲ್ಲ ಎಂದು ಅವರು ಹೇಳಿದರು.

ADVERTISEMENT

ಪ್ರಚೋದನೆಗೆ ಪ್ರತಿಕ್ರಿಯೆ ಇಲ್ಲ:

ಬೆಂಗಳೂರು ಬಂದ್‌ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗಲಾಟೆ, ಪ್ರತಿಭಟನೆಗಳ ಮೂಲಕ ಪ್ರಚೋದನೆ ಮಾಡಿದರೆ ಪ್ರತಿಕ್ರಿಯೆ ನೀಡಬೇಡಿ. ಒಂದು ವೇಳೆ ವಾಹನಗಳು ಬರುವುದಕ್ಕೆ ಅಡ್ಡಿ ಮಾಡಿದರೆ ಎಷ್ಟೇ ದೂರ ಇದ್ದರೂ ಮೆರವಣಿಗೆ ಮೂಲಕ ಅರಮನೆ ಮೈದಾನಕ್ಕೆ ಬರಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಆರಂಭದಲ್ಲಿ 2 ಲಕ್ಷ ಜನ ಸೇರಿಸುವ ಉದ್ದೇಶವಿತ್ತು. ಸಂಖ್ಯೆ ಎರಡು ಪಟ್ಟು ಹೆಚ್ಚಲಿದೆ. ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆದುಕೊಂಡು ಬರಲು 4000 ಬಸ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಒಂದು ವೇಳೆ ಬಸ್‌ನಲ್ಲಿ ಬರಲು ತೊಂದರೆ ಮಾಡಿದರೆ, ಟ್ರಕ್‌ಗಳು, ಟ್ರಾಕ್ಟರ್‌ಗಳು ಮತ್ತು ಇತರ ವಾಹನಗಳಲ್ಲಿ ಬರಲು ಸೂಚಿಸಲಾಗಿದೆ ಎಂದರು.

ಬಂದ್‌ ಕೈ ಬಿಡುವುದಿಲ್ಲ: ವಾಟಾಳ್

‘ಪ್ರಧಾನಿ ಗಮನ ಸೆಳೆಯಲು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದೇವೆ. ಭಾನುವಾರಕ್ಕೆ ಮೊದಲೇ ಈ ವಿಷಯದ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರೆ ಬಂದ್‌ ಹಿಂದಕ್ಕೆ ಪಡೆಯುತ್ತೇವೆ’ ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ತಿಳಿಸಿದರು.

ಕುಡಿಯುವ ನೀರಿನ ವಿಚಾರವಾಗಿ ಮೂರು ವರ್ಷಗಳಿಂದ ಹೋರಾಟ ನಡೆದಿದೆ. ಪ್ರಧಾನ ಮಂತ್ರಿಯವರು ಮಧ್ಯ ಪ್ರವೇಶಿಸಿ, ಕುಡಿಯುವ ನೀರು ಕೊಡಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಪ್ರಧಾನಿಯವರು ಎಲ್ಲ ರಾಜ್ಯಗಳ ವಿಚಾರ ನೋಡಿಕೊಳ್ಳಬೇಕು. ರಾಜ್ಯದ ಸಂಸದರು ಮತ್ತು ಕೇಂದ್ರ ಮಂತ್ರಿಗಳು ಅವರನ್ನು ಮನವೊಲಿಸುವ ಕೆಲಸ ಮಾಡಬೇಕಿತ್ತು ಎಂದು ವಾಟಾಳ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.