ADVERTISEMENT

ಬಾಯಿ ಕ್ಯಾನ್ಸರ್ ನಿಯಂತ್ರಿಸಲು ಕಾರ್ಯಪಡೆ ರಚನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ಬಾಯಿ ಕ್ಯಾನ್ಸರ್ ನಿಯಂತ್ರಿಸಲು ಕಾರ್ಯಪಡೆ ರಚನೆ
ಬಾಯಿ ಕ್ಯಾನ್ಸರ್ ನಿಯಂತ್ರಿಸಲು ಕಾರ್ಯಪಡೆ ರಚನೆ   

ಬೆಂಗಳೂರು: ಒಂದು ದಶಕದೊಳಗೆ ದೇಶದಲ್ಲಿ ಬಾಯಿ ಕ್ಯಾನ್ಸರ್‍ ಸಂಪೂರ್ಣ ನಿಯಂತ್ರಿಸುವ ಉದ್ದೇಶದಿಂದ ಪರಿಣತ ವೈದ್ಯರ ಸ್ವತಂತ್ರ ಕಾರ್ಯಪಡೆ ಅಸ್ತಿತ್ವಕ್ಕೆ ತರಲಾಗಿದೆ.

ನಗರದಲ್ಲಿ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಪಡೆ ಸಂಚಾಲಕರಾದ ಬಯೊಕಾನ್ ಸ್ಥಾಪಕಿ ಡಾ.ಕಿರಣ್ ಮಜುಂದಾರ್ ಶಾ, ‘ಬಾಯಿ ಕ್ಯಾನ್ಸರ್‌ ಬಹಳಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಬಹುಶಿಸ್ತೀಯ ಚಿಕಿತ್ಸೆಯ ಅಗತ್ಯವಿದೆ. ಇದನ್ನು ಈಡೇರಿಸಲು ಕಾರ್ಯಪಡೆ ರಚಿಸಲಾಗಿದೆ. ಇದು ಸ್ವತಂತ್ರ ವೃತ್ತಿಪರರನ್ನು ಒಳಗೊಂಡಿದೆ. ರೋಗಿಗಳನ್ನು ಕೇಂದ್ರೀಕರಿಸಿ ಸುಸ್ಥಿರ ಆರೋಗ್ಯಕ್ಕೆ ಒತ್ತು ನೀಡಲು ರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಣ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.

ದೆಹಲಿಯ ಎಐಎಂಎಸ್‍ನ ನ್ಯಾಷನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನ ಮುಖ್ಯಸ್ಥ ಡಾ.ಜಿ.ಕೆ.ರತ್,`ಬಾಯಿ ಕ್ಯಾನ್ಸರ್ ಪರಿಣಾಮ ಗಂಭೀರವಾದುದು. ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬೇಕು. ಈ ಚಿಕಿತ್ಸೆಯಲ್ಲಿರುವ ತೊಡಕುಗಳನ್ನು ನಿವಾರಿಸಲು ಮತ್ತು ಅರಿವು ಮೂಡಿಸಲು ಅಸ್ತಿತ್ವಕ್ಕೆ ತಂದಿರುವ ಕಾರ್ಯಪಡೆ ದೇಶದಲ್ಲಿಯೇ ಅತಿ ದೊಡ್ಡ ಯೋಜನೆ ಎನಿಸಿದೆ. ಇದು ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ನಿಯಂತ್ರಿಸಲು ಸಂಶೋಧನೆ ನಡೆಸಲಿದೆ’ ಎಂದರು.

ADVERTISEMENT

‘ಬಾಯಿ ಕ್ಯಾನ್ಸರ್‌ ಸಾಮಾನ್ಯವಾಗಿ ತಂಬಾಕು ಸೇವನೆಯಿಂದ ಬರುತ್ತದೆ. ತಂಬಾಕು ತ್ಯಜಿಸುವುದೇ ಅತ್ಯುತ್ತಮ ಮುನ್ನೆಚ್ಚರಿಕೆ ಕ್ರಮ. ಕಾರ್ಯಪಡೆಯು ತಂಬಾಕು ಸೇವನೆ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶವನ್ನೂ ಹೊಂದಿದೆ’ ಎಂದು ಟಾಟಾ ಮೆಮೊರಿಯಲ್ ಆಸ್ಪತ್ರೆಯ ಕ್ಯಾನ್ಸರ್‌ ರೋಗ ತಜ್ಞ ಡಾ.ಕುಮಾರ್ ಪ್ರಭಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.