ADVERTISEMENT

ಬೆಂಕಿ ಕಾಣಿಸಿಕೊಳ್ಳುವುದರ ಹಿಂದೆ ಯಾರದೋ ಕೈವಾಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 20:10 IST
Last Updated 4 ಫೆಬ್ರುವರಿ 2018, 20:10 IST
ಬೆಳ್ಳಂದೂರು ಕೆರೆಗೆ ಕೆ.ಜೆ.ಜಾರ್ಜ್‌ ಭೇಟಿ ನೀಡಿ ಪರಿಶೀಲಿಸಿದರು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಇದ್ದಾರೆ
ಬೆಳ್ಳಂದೂರು ಕೆರೆಗೆ ಕೆ.ಜೆ.ಜಾರ್ಜ್‌ ಭೇಟಿ ನೀಡಿ ಪರಿಶೀಲಿಸಿದರು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಇದ್ದಾರೆ   

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ಎನ್‌ಜಿಟಿ) ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಮೀಪಿಸುತ್ತಿದ್ದಂತೆ ಇಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರ ಹಿಂದೆ ಯಾರದೋ  ಕೈವಾಡ ಇರುವಂತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅನುಮಾನ ವ್ಯಕ್ತಪಡಿಸಿದರು.

ಬೆಳ್ಳಂದೂರು ಕೆರೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ಯಾರಾದರೂ ಉದ್ದೇಶಪೂರ್ವಕವಾಗಿಯೇ ಕೆರೆಗೆ ಬೆಂಕಿ ಹಚ್ಚಿದ್ದಾರೆಯೇ ಅಥವಾ ನೈಸರ್ಗಿಕವಾಗಿ ಹೊತ್ತಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ’ ಎಂದರು.

ನೀರಿನಲ್ಲಿ ಶೇ 0.01ರಷ್ಟು ಮೀಥೇನ್‌ ಅಂಶ ಇದೆ. ಆದರೆ, ಇದರಿಂದಾಗಿ ಬೆಂಕಿ ಹೊತ್ತಿಕೊಂಡಿಲ್ಲ. ಒಣ ಹುಲ್ಲಿನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದರು.

ADVERTISEMENT

‘ಕೆರೆಗೆ ನೀರಿನ ಒಳಹರಿವು ಹಾಗೂ ಹೊರಹರಿವು ನಿಯಂತ್ರಿಸಲು ಜಾರು ಬಾಗಿಲು (ಸ್ಲೂಸ್‌ ಗೇಟ್‌) ಅಳವಡಿಸಲಾಗುತ್ತಿದೆ. ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಏರೇಟರ್‌ ಅಳವಡಿಸಲಾಗುತ್ತಿದೆ. ಕೆರೆಯ ಮೇಲ್ವಿಚಾರಣಾ ಸಮಿತಿ ಸರ್ಕಾರದ ಕಾರ್ಯವೈಖರಿ ಟೀಕಿಸಿದೆ. ಆದರೆ, ನಾವು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಗಮನ ವಹಿಸಬೇಕು’ ಎಂದು ಅವರು ಹೇಳಿದರು.

‘ಅನಧಿಕೃತ ಕೈಗಾರಿಕೆ ಮುಚ್ಚಿಸುತ್ತೇವೆ’

‘ಕೆರೆಯ ಸುತ್ತಲೂ ಇರುವ ಅನಧಿಕೃತ ಕೈಗಾರಿಕೆಗಳನ್ನು ಮುಚ್ಚಿಸುತ್ತೇವೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ’ ಎಂದು ಸಚಿವ ಜಾರ್ಜ್‌ ತಿಳಿಸಿದರು.

ಜಲಮೂಲಕ್ಕೆ ಕೊಳಚೆ ನೀರು ಸೇರುವ ಕಡೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸಲಾಗುತ್ತಿದೆ. 2020ರ ವೇಳೆಗೆ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಅಹವಾಲು ಆಲಿಸದ ಸಚಿವ– ಅಸಮಾಧಾನ

‘ಸಚಿವ ಜಾರ್ಜ್‌ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತರಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ನಮ್ಮ ಅಹವಾಲು ಆಲಿಸಲು ಸಚಿವರಿಗೆ ಪುರುಷೊತ್ತಿಲ್ಲ’ ಎಂದು ಸ್ಥಳೀಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.