ADVERTISEMENT

'ಸವಿಕಿರಣ' ಆರಂಭಿಸಿದ ಬೆಸ್ಕಾಂ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:52 IST
Last Updated 7 ಫೆಬ್ರುವರಿ 2018, 19:52 IST
ಸವಿ ಕಿರಣ ಸೇವೆಗೆ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಶಾಸಕ ಎನ್‌.ಎ.ಹ್ಯಾರಿಸ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಇದ್ದರು – ಪ್ರಜಾವಾಣಿ ಚಿತ್ರ
ಸವಿ ಕಿರಣ ಸೇವೆಗೆ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಶಾಸಕ ಎನ್‌.ಎ.ಹ್ಯಾರಿಸ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಸ್ಕಾಂ ತನ್ನ ಗ್ರಾಹಕರಿಗೆ 24 ತಾಸಿನೊಳಗೆ ವಿದ್ಯುತ್‌ ಸಂಪರ್ಕ ಒದಗಿಸುವ 'ಸವಿ ಕಿರಣ' (ಫಾಸ್ಟ್‌ ಟ್ರ್ಯಾಕ್‌) ಸೇವೆಯನ್ನು ನಗರದ 49 ಉಪ ವಿಭಾಗಗಳಲ್ಲಿ ಬುಧವಾರ ಏಕಕಾಲದಲ್ಲಿ ಆರಂಭಿಸಿತು.

ಹೊಸ ಸಂಪರ್ಕ, ಒಬ್ಬರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ವರ್ಗಾವಣೆ, ದರ (ಟ್ಯಾರಿಫ್‌) ಬದಲಾವಣೆ, ಲೋಡ್‌ ಕಡಿಮೆ ಮಾಡುವ ಅಥವಾ ಹೆಚ್ಚಿಸಿಕೊಳ್ಳುವ ಸೌಲಭ್ಯಗಳು ಇದರಲ್ಲಿದೆ. ಈ ಸೇವೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಇದರಿಂದ ಸುಮಾರು 5 ಲಕ್ಷ ಹೊಸ ಗ್ರಾಹಕರಿಗೂ ಅನುಕೂಲವಾಗಲಿದೆ. ಸದ್ಯದಲ್ಲೇ ಬೆಸ್ಕಾಂನ ಬೆಂಗಳೂರು ಗ್ರಾಮಾಂತರ ವಲಯ ಮತ್ತು ಚಿತ್ರದುರ್ಗ ವಲಯಗಳಿಗೂ ವಿಸ್ತರಿಸಲಾಗುತ್ತದೆ. ಹಂತಹಂತವಾಗಿ ಉಳಿದ ಎಸ್ಕಾಂಗಳಲ್ಲೂ ಆರಂಭಿಸುತ್ತೇವೆ’ ಎಂದರು.

ADVERTISEMENT

ಏನಿದು ಸವಿಕಿರಣ:

ಕಟ್ಟಡ ಪೂರ್ಣಗೊಂಡ ನಂತರ ಗೃಹ ಬಳಕೆ, ವಾಣಿಜ್ಯ ಬಳಕೆಯ ವಿದ್ಯುತ್‌ ಸಂಪರ್ಕ ಪಡೆಯುವ ಗ್ರಾಹಕರು ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ... ಹೀಗೆ ಯಾವುದಾದರೂ ಒಂದು ದಾಖಲೆ ಜತೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಹಾಯವಾಣಿ ಶಾಖೆಯಲ್ಲೂ ನೇರವಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಉಪ ವಿಭಾಗದ ಕಚೇರಿಗಳಲ್ಲಿ ಸವಿಕಿರಣ ಸಹಾಯವಾಣಿ ಮತ್ತು ನೋಂದಣಿ ಕೇಂದ್ರ ತೆರೆಯಲಾಗಿದೆ.

ಅರ್ಜಿ ಸಲ್ಲಿಸಿದ ತಕ್ಷಣ ಬೇಡಿಕೆ ಪಟ್ಟಿ (ಡಿ.ಡಿ) ಸ್ವಯಂಚಾಲಿತವಾಗಿ ಸೃಷ್ಟಿಯಾಗುತ್ತದೆ. ಆನ್‌ಲೈನ್‌ನಲ್ಲೇ ನಿಗದಿತ ಶುಲ್ಕ ಪಾವತಿಸಿದರೆ, 24 ತಾಸಿನೊಳಗೆ ಮೀಟರ್‌ ಕಿಟ್‌ ಸಮೇತ ಎಂಜಿನಿಯರ್‌ಗಳು ಹಾಜರಾಗಿ, ವಿದ್ಯುತ್‌ ಸಂಪರ್ಕ ನೀಡುತ್ತಾರೆ. ಇದಕ್ಕೆ ಗುತ್ತಿಗೆದಾರರ ಅಗತ್ಯವೇ ಇರುವುದಿಲ್ಲ. 7.5 ಕೆ.ವಿ ಸಾಮರ್ಥ್ಯದವರೆಗಿನ ವಿದ್ಯುತ್‌ ಸಂಪರ್ಕ ಪಡೆಯಲು ಇದರಲ್ಲಿ ಅವಕಾಶವಿದೆ. ಕಟ್ಟಡ ಬೇರೊಬ್ಬರ ಹೆಸರಿನಲ್ಲಿದ್ದರೂ ಕರಾರು ಪತ್ರ ಹಾಜರುಪಡಿಸಿ ಬಾಡಿಗೆದಾರರು ಅಥವಾ ವಾಸವಿರುವವರ ಹೆಸರಿನಲ್ಲೂ ವಿದ್ಯುತ್‌ ಸಂಪರ್ಕ ಪಡೆಯಬಹುದು.

ಸಂಪರ್ಕ: www.bescom.org ವೆಬ್‌ಸೈಟ್‌ನ 'online service' ಪೋರ್ಟಲ್‌ನಲ್ಲಿ ‘Fast track option' ಆಯ್ಕೆ ಮಾಡಿ ಅರ್ಜಿ ನೋಂದಾಯಿಸಬೇಕು.

ಅಂಕಿ ಅಂಶ

1.89 ಕೋಟಿ -ರಾಜ್ಯದಲ್ಲಿ ಇದುವರೆಗೆ ಮಾರಾಟ ಮಾಡಿರುವ ಎಲ್‌ಇಡಿ ಬಲ್ಬ್‌

2000 ಮೆಗಾವಾಟ್‌ - ಪಾವಗಡ ಸೌರವಿದ್ಯುತ್‌ ಪಾರ್ಕ್‌ನ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ

11 -ನಗರದಲ್ಲಿ ಬೆಸ್ಕಾಂ ಸ್ಥಾಪಿಸಲಿರುವ ಫಾಸ್ಟ್‌ ರಿಚಾರ್ಚ್‌ ಸ್ಟೇಷನ್‌

ಎಲೆಕ್ಟ್ರಿಕ್‌ ವಾಹನಗಳಿಗೆ ಫಾಸ್ಟ್‌ ರಿಚಾರ್ಚ್‌ ಸ್ಟೇಷನ್‌

ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಬೆಸ್ಕಾಂನಿಂದ ಫಾಸ್ಟ್‌ ರಿಚಾರ್ಜ್‌ ಸ್ಟೇಷನ್‌ ಆರಂಭಿಸಲಾಗುತ್ತಿದೆ. ಕಂಪನಿಯ ಮುಖ್ಯ ಕಚೇರಿ ಆವರಣದಲ್ಲಿ ಫೆ.15ರಂದು ಒಂದು ಸ್ಟೇಷನ್‌ ಕಾರ್ಯಾರಂಭಿಸಲಿದೆ ಎಂದು ಶಿವಕುಮಾರ್‌ ತಿಳಿಸಿದರು.

ವಿಧಾನಸೌಧ ಸಮೀಪ ಸೇರಿ 11 ಕಡೆಗಳಲ್ಲಿ 6 ತಿಂಗಳೊಳಗೆ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿ ಇದೆ. ಎಲೆಕ್ಟ್ರಿಕ್‌ ಮೋಟರ್‌ ವಾಹನಗಳನ್ನು ಇಲ್ಲಿ ರಿಚಾರ್ಜ್‌ ಮಾಡಿಕೊಳ್ಳಬಹುದು. ರಿಚಾರ್ಜ್‌ ದರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸದ್ಯದಲ್ಲೇ ನಿಗದಿಪಡಿಸಲಿದೆ ಎಂದರು.

ಗೃಹ ಬಳಕೆ ಸಂಪರ್ಕ ಶುಲ್ಕ

ವಿದ್ಯುತ್‌ ಸಾಮರ್ಥ್ಯ ಸಿಂಗಲ್‌ ಫೇಸ್‌ ಮೀಟರ್‌ ಸಹಿತ ಒಟ್ಟು ಪಾವತಿ ತ್ರೀಫೇಸ್‌ ಮೀಟರ್‌ ಸಹಿತ ಪಾವತಿ

240 ವಾಟ್‌ ₹1,108 ₹2,813

500 ವಾಟ್‌ ₹1,188 ₹2,893

750 ವಾಟ್‌ ₹1,268 ₹2,973

1 ಕೆ.ವಿ ₹1,403 ₹3,108

7.5 ಕೆ.ವಿ ₹4,863 ₹16,168

ವಾಣಿಜ್ಯ ಬಳಕೆ ಸಂಪರ್ಕ ಶುಲ್ಕ

ಬೇಡಿಕೆ ನೋಂದಣಿ ಶುಲ್ಕ ಸಿಂಗಲ್‌ ಫೇಸ್‌ಗೆ ಒಟ್ಟು ಪಾವತಿ ತ್ರೀಫೇಸ್‌ ಮೀಟರ್‌ ಸಹಿತ ಪಾವತಿ

240 ವಾಟ್‌  ₹1,433 ₹3,138

500 ವಾಟ್‌ ₹1,753 ₹3,458

750 ವಾಟ್‌ ₹2,113 ₹3,818

1 ಕೆ.ವಿ ₹2,463 ₹4,168

7.5 ಕೆ.ವಿ ₹8,863 ₹23,498

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.