ADVERTISEMENT

ರೈಲು ನಿಲ್ದಾಣದಲ್ಲಿ ಸೆಂಟಿಂಗ್‌ ಲೈನ್‌ ಕಾರ್ಯಾರಂಭ

ಪ್ಲಾಟ್‌ಫಾರ್ಮ್‌ನಿಂದ ನಿರ್ವಹಣಾ ಹಳಿಗೆ ರೈಲು ಕೊಂಡೊಯ್ಯಲು ಅನುಕೂಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 20:30 IST
Last Updated 11 ಫೆಬ್ರುವರಿ 2018, 20:30 IST
ನಗರದ ಬಿನ್ನಿಮಿಲ್‌ ಬಳಿ ನಿರ್ಮಿಸಿರುವ ಸೆಂಟಿಂಗ್‌ ಲೈನ್‌ ಹಾಗೂ ಉಕ್ಕಿನ ಸೇತುವೆ
ನಗರದ ಬಿನ್ನಿಮಿಲ್‌ ಬಳಿ ನಿರ್ಮಿಸಿರುವ ಸೆಂಟಿಂಗ್‌ ಲೈನ್‌ ಹಾಗೂ ಉಕ್ಕಿನ ಸೇತುವೆ   

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸೆಂಟಿಂಗ್‌ ಲೈನ್‌ (ರೈಲುಗಳನ್ನು ಪ್ಲಾಟ್‌ಫಾರ್ಮ್‌ನಿಂದ ನಿರ್ವಹಣಾ ಹಳಿಗೆ ಕೊಂಡೊಯ್ಯಲು ಇರುವ ಹಳಿ) ಕಾರ್ಯಾರಂಭ ಮಾಡಿದೆ.

ಕಂಟೋನ್ಮೆಂಟ್‌ ಕಡೆಯಿಂದ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌, ಕಾರವಾರ ಎಕ್ಸ್‌ಪ್ರೆಸ್‌, ಕರ್ನಾಟಕ ಉದ್ಯಾನ, ಲಾಲ್‌ಬಾಗ್‌ ಎಕ್ಸ್‌ಪ್ರೆಸ್‌ ಸೇರಿದಂತೆ ಅನೇಕ ರೈಲುಗಳು ನಿಲುಗಡೆ ಮಾಡಿದ ಬಳಿಕ ನಿರ್ವಹಣಾ ಹಳಿಗೆ (ಪಿಟ್‌ ಲೈನ್‌) ಹೋಗಬೇಕಿತ್ತು. ಈ ವೇಳೆ ಕಂಟೋನ್ಮೆಂಟ್‌ ಕಡೆಯಿಂದ ಬರುವ ಹಾಗೂ ಹೋಗುವ ರೈಲುಗಳಿಗೆ ತೊಂದರೆ ಆಗುತ್ತಿತ್ತು.

ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಬಿನ್ನಿಮಿಲ್‌ನ ಸುಮಾರು 3 ಎಕರೆಯನ್ನು ರೈಲ್ವೆ ಇಲಾಖೆ ಖರೀದಿಸಿತ್ತು. 2013ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅಲ್ಲಿ ಪ್ರತ್ಯೇಕವಾದ ಹಳಿಗಳನ್ನು ನಿರ್ಮಿಸಲಾಗಿದೆ.

ADVERTISEMENT

ನಿಲ್ದಾಣದ 1ರಿಂದ 9 ಪ್ಲಾಟ್‌ಫಾರ್ಮ್‌ಗಳಿಗೆ ಬರುವ ರೈಲುಗಳನ್ನು ಸೆಂಟಿಂಗ್‌ ಲೈನ್‌ಗೆ ಕೊಂಡೊಯ್ಯಬಹುದು. ಇದರಿಂದ ಸಮಯ ಉಳಿತಾಯವಾಗಲಿದ್ದು, ರೈಲುಗಳು ನಿಗದಿತ ಅವಧಿಯಲ್ಲಿ ಹೋಗಲು ಅನುಕೂಲವಾಗಲಿದೆ ಎಂದು ರೈಲ್ವೆ ಕಾರ್ಯಕರ್ತ ಕೃಷ್ಣಪ್ರಸಾದ್‌ ತಿಳಿಸಿದರು.

ಕೆಲ ಪ್ರಮುಖ ರೈಲುಗಳು ಬೆಳಿಗ್ಗೆ ಬಂದರೆ ಸಂಜೆ ಹೋಗುತ್ತವೆ. ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲೇ ರೈಲುಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅವುಗಳನ್ನು ನಿರ್ವಹಣಾ ಹಳಿಗೆ ಕೊಂಡೊಯ್ಯಬೇಕು. ಈ ರೈಲಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಉಳಿದ ರೈಲುಗಳು ಸ್ವಲ್ಪ ತಡವಾಗಿ ಹೊರಡಬೇಕಿತ್ತು. ಈಗ ಆ ತೊಂದರೆ ತಪ್ಪಿದಂತಾಗಿದೆ ಎಂದು ರೈಲ್ವೆ ಕಾರ್ಯಕರ್ತ ಸಂಜೀವ್‌ ದ್ಯಾಮಣ್ಣವರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.