ADVERTISEMENT

80ಕ್ಕೂ ಹೆಚ್ಚು ಪಕ್ಷಿಗಳ ಸಾವು

ಅಸುನೀಗುತ್ತಿವೆ ಕಾಗೆ, ಕೊಕ್ಕರೆ, ಹದ್ದು, ಪಾರಿವಾಳ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:12 IST
Last Updated 14 ಮಾರ್ಚ್ 2020, 22:12 IST

ಬೆಂಗಳೂರು: ನಗರದಲ್ಲಿ ಕಳೆದ ಒಂದು ವಾರದಲ್ಲಿ 80ಕ್ಕೂ ಹೆಚ್ಚು ಪಕ್ಷಿಗಳು ಸಾವಿಗೀಡಾಗಿವೆ. ಆದರೆ, ಇದಕ್ಕೆ ಹಕ್ಕಿಜ್ವರ ಮತ್ತು ಕೊರೊನಾ ವೈರಸ್‌ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಪಕ್ಷಿಗಳ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಅಧಿಕಾರಿಗಳನ್ನೂ ಚಿಂತೆಗೀಡು ಮಾಡಿದೆ. ಕಾಗೆ, ಕೊಕ್ಕರೆ, ಪಾರಿವಾಳಗಳು ಸಾವಿಗೀಡಾಗುತ್ತಿವೆ. ತಾಪಮಾನ ಹೆಚ್ಚಾಗುತ್ತಿರುವುದು ಇವುಗಳ ಸಾವಿಗೆ ಕಾರಣ ಎನ್ನಲಾಗಿದೆ. ಆದರೆ, ವಾರದಿಂದ ಈಚೆಗೆ ಹಕ್ಕಿಗಳ ಸಾವಿನ ಪ್ರಮಾಣದಲ್ಲಿ ದಿಢೀರ್‌ ಏರಿಕೆಯಾಗಲು ಕಾರಣವೇನು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

ಬಿಬಿಎಂಪಿಯ ಉಪಅರಣ್ಯ ಸಂರಕ್ಷಣಾಧಿಕಾರಿ, ‘ವನ್ಯಜೀವಿ ಸಂರಕ್ಷಣಾ ತಂಡಗಳ ಪ್ರಕಾರ, ನಗರದಲ್ಲಿ ಒಂದು ವಾರದಿಂದ ಈಚೆಗೆ 80ಕ್ಕೂ ಹೆಚ್ಚು ಪಕ್ಷಿಗಳು ಸಾವಿಗೀಡಾಗಿವೆ.ಇವುಗಳ ಸಾವಿಗೆ ಹಕ್ಕಿಜ್ವರ ಕಾರಣ ಎಂಬ ವದಂತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ಯಾವುದೇ ಆಧಾರವಿಲ್ಲ.ಸತ್ತ ಪಕ್ಷಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರವೇ ಪಕ್ಷಿಗಳ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿಯುತ್ತದೆ’ ಎಂದರು.

ADVERTISEMENT

ವನ್ಯಜೀವಿ ವಾರ್ಡನ್‌ ಪ್ರಸನ್ನಕುಮಾರ್, ‘ಮೈಸೂರು ಸ್ಯಾಟಲೈಟ್‌ ಬಸ್‌ನಿಲ್ದಾಣದ ಹಿಂದೆ 10, ಉತ್ತರಹಳ್ಳಿಯಲ್ಲಿ
8, ಗಿರಿನಗರದಲ್ಲಿ ನಾಲ್ಕು ಹಾಗೂ ನಗರ ಮೀಸಲು ಪೊಲೀಸ್‌ ಪಡೆ ಕಚೇರಿ ಬಳಿ ನಾಲ್ಕು ಪಕ್ಷಿಗಳು ಸತ್ತು ಬಿದ್ದಿದ್ದವು’ ಎಂದು ತಿಳಿಸಿದರು.

ಪಕ್ಷಿಗಳ ರಕ್ಷಣಾ ತಂಡದಲ್ಲಿ ಕೆಲಸ ಮಾಡುವ ಶಾಲಾ ಶಿಕ್ಷಕ ದೀಪಕ್, ‘ತಾವರೆಕೆರೆ, ವಿಲ್ಸನ್‌ ಗಾರ್ಡನ್‌, ಸರ್ಜಾಪುರ ಮತ್ತು ಸುತ್ತ–ಮುತ್ತಲಿನ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕಾಗೆ ಮತ್ತು ಪಾರಿವಾಳಗಳು ಸತ್ತು ಬಿದ್ದಿದ್ದನ್ನು ಕಂಡಿದ್ದೇನೆ. ಆದರೆ, ಇದಕ್ಕೆ ಕೊರೊನಾ ವೈರಸ್‌ ಕಾರಣ ಎಂಬ ವದಂತಿ ಸರಿಯಲ್ಲ. ವಿಷಾಹಾರ ಸೇವಿಸಿ ಪಕ್ಷಿಗಳು ಸಾವಿಗೀಡಾಗಿರಬಹುದು’ ಎಂದು ಪಕ್ಷಿಪ್ರೇಮಿ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.