ADVERTISEMENT

‘ತಪಸ್‌’: 9 ವಿದ್ಯಾರ್ಥಿಗಳು ಐಐಟಿಗೆ ಅರ್ಹತೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:49 IST
Last Updated 16 ಅಕ್ಟೋಬರ್ 2021, 19:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಈ ಬಾರಿಯ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಒಂಬತ್ತು ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ಸ್ವಯಂ ಸೇವಾ ಸಂಸ್ಥೆಯಾಗಿದೆ. ‘ತಪಸ್’ ಯೋಜನೆ ಮೂಲಕ 10ನೇ ತರಗತಿ ಓದುತ್ತಿರುವ ಬಡ ಮತ್ತು ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ ಎರಡು ವರ್ಷಗಳ ಪಿಯು ಶಿಕ್ಷಣದ ಜೊತೆ ಜತೆ ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಈ ಯೋಜನೆ ಸಂಪೂರ್ಣ ಉಚಿತವಾಗಿದೆ.

ಒಟ್ಟು 32 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಬೇಸ್ ಸಂಸ್ಥೆ ಬೋಧಕರು ನೀಡುವ ಶಿಕ್ಷಣ ಪಡೆದು ಒಂಬತ್ತು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಸಾಧನೆ ಮಾಡಿರುವ ಈ ಎಲ್ಲ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಅಖಿಲ ಭಾರತ ಮಟ್ಟದಲ್ಲಿ ಯಶವಂತಗೌಡ ಜಿ.ಎಸ್‌. 4,429ನೇ ರ‍್ಯಾಂಕ್‌, ಲೋಹಿತ್‌ ಪಿ. ತಳವಾರ 9,493ನೇ ರ‍್ಯಾಂಕ್‌, ಯಶಸ್‌ ಆರ್‌.ಎಸ್‌. 16,111ನೇ ರ‍್ಯಾಂಕ್‌, ಅಕ್ಷಯ ಗೌಡ ಡಿ.ಜೆ. 24,965, ಶಶಾಂಕ ಜೆ. ಶೆಟ್ಟಿ 26,160ನೇ ರ‍್ಯಾಂಕ್‌, ಸಾಗರ್‌ ಎಚ್‌.ಆರ್‌ 28,542ನೇ ರ‍್ಯಾಂಕ್ ಗಳಿಸಿ ದ್ದಾರೆ.

ಪರಿಶಿಷ್ಟ ಪಂಗಡ ವಿಭಾಗದಲ್ಲಿ ಆದರ್ಶ ವಿ. 360ನೇ ರ‍್ಯಾಂಕ್‌, ಪರಿಶಿಷ್ಟ ಪಂಗಡ ವಿಭಾಗದಲ್ಲಿ ರಾಘವೇಂದ್ರ 931, ಆರ್ಥಿಕವಾಗಿ ಹಿಂದುಳಿದ ವರ್ಗ ವಿಭಾಗದಲ್ಲಿ ಕಿರಣ್‌ ಎಸ್‌ ಹೆಗಡೆ 4,615ನೇ ರ‍್ಯಾಂಕ್‌ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿ ಯಶವಂತಗೌಡ ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಗೂಗರೆದೊಡ್ಡಿಯ ಗ್ರಾಮ ದವರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಧನಲಕ್ಷ್ಮಿ ಸಂಸ್ಥೆಯಲ್ಲಿ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ತನ್ನ ಪ್ರತಿಭೆ ಮತ್ತು ಕಠಿಣ ಶ್ರಮದಿಂದ ಈ ಸಾಧನೆ ಮಾಡಿದ್ದಾರೆ.

ಲೋಹಿತ್ ತಳವಾರ ಮೂಲತಃ ಹಾವೇರಿ ಜಿಲ್ಲೆಯವರು. ತಂದೆ ದರ್ಜಿ ಕೆಲಸ ಮಾಡುತ್ತಿದ್ದು, ತಾಯಿ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ನಿರ್ವಹಿಸಿ ಜೀವನ ಸಾಗಿಸುತ್ತಿದ್ದಾರೆ. ಲೋಹಿತ್ ಅವರು ಧಾರವಾಡ ಜವಾಹರ ನವೋದಯ ವಿದ್ಯಾಲಯದಲ್ಲಿ ಕಲಿತು ನಂತರ ತಪಸ್‍ಗೆ ಆಯ್ಕೆಯಾಗಿದ್ದರು. ಸಾಗರ್ ಎಚ್.ಆರ್. ಅವರು ಮೂಲತಃ ತೀರ್ಥಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದವರು. ತಂದೆ, ತಾಯಿ ಸಣ್ಣ ಕೃಷಿಕರು. 1ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದಿದ್ದರು. ಅಪಾರ ಪರಿಶ್ರಮದಿಂದ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.