ADVERTISEMENT

981 ಸೋಂಕಿತರು, 10 ಮಂದಿ ಸಾವು

ಕೋವಿಡ್‌–19: ರೋಗ ಲಕ್ಷಣ ಇಲ್ಲದೆ ಮೃತಪಟ್ಟವರ ಮಾಹಿತಿ ಅಲ್ಲಗಳೆದ ತಜ್ಞರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:58 IST
Last Updated 6 ಜುಲೈ 2020, 19:58 IST
ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಕಲಾಸಿಪಾಳ್ಯ ಮುಖ್ಯ ರಸ್ತೆಯನ್ನು ಬಂದ್‌ ಮಾಡಲಾಗಿದೆ. –ಪ್ರಜಾವಾಣಿ ಚಿತ್ರ/ ರಂಜು ಪಿ
ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಕಲಾಸಿಪಾಳ್ಯ ಮುಖ್ಯ ರಸ್ತೆಯನ್ನು ಬಂದ್‌ ಮಾಡಲಾಗಿದೆ. –ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು, ಹೊಸದಾಗಿ 981 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ (10,561) ದಾಟಿದೆ. ಹತ್ತು ಮಂದಿ ಮೃತಪಟ್ಟಿದ್ದಾರೆ.

ನಗರದಲ್ಲಿ ಮತಪಟ್ಟವರಲ್ಲಿ 44 ವರ್ಷದ ಪುರುಷ ಸಹ ಸೇರಿದ್ದಾರೆ. ‘ಸಾರಿ’ ಲಕ್ಷಣ ಹೊಂದಿದ್ದ ಇವರು ಜೂನ್‌ 20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಉಳಿದಂತೆ 54 ವರ್ಷದ ಪುರುಷ, 58 ವರ್ಷದ ಮಹಿಳೆ, 59 ವರ್ಷದ ಪುರುಷ ಮತ್ತು ಮಹಿಳೆ, 65, 68, 73, 74 ಹಾಗೂ 79 ವರ್ಷದ ವೃದ್ಧರು ಸಾವನ್ನಪ್ಪಿದ್ದಾರೆ.

ನಗರದ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಕೆಲವು ಸೋಂಕಿನ ಲಕ್ಷಣವೇ ಇಲ್ಲದವರು ಮೃತಪಟ್ಟಿದ್ದಾರೆ ಎಂಬ ಈ ಹಿಂದಿನ ವರದಿಗಳನ್ನು ಅಲ್ಲಗಳೆದಿರುವ ಆರೋಗ್ಯ ಅಧಿಕಾರಿಗಳು, ದಾಖಲೆ ಸಿದ್ಧಪಡಿಸುವಾಗ ಆಗಿರುವ ತಪ್ಪಿನಿಂದ ಈ ತಪ್ಪು ಮಾಹಿತಿ ರವಾನೆಯಾಗಿರಬಹುದು, ಮೃತಪಟ್ಟವರಿಗೆಲ್ಲರಿಗೂ ಕೊನೆಯ ಹಂತದಲ್ಲಾದರೂ ಕೋವಿಡ್ ಲಕ್ಷಣಗಳು ಕಂಡುಬಂದಿದ್ದವು ಎಂದು ಹೇಳಿದ್ದಾರೆ.‌

ADVERTISEMENT

ಮೃತಪಟ್ಟವರಲ್ಲಿ ಶೇ 43ರಷ್ಟು ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ (ಸಾರಿ) ಕೊನೆಯುಸಿರೆಳೆದವರು. ಕೋವಿಡ್‌ ಇಂತಹ ರೋಗಿಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ರಾಮನಗರದಲ್ಲಿ ಜೂನ್ 22ರಂದು 90 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಅವರಿಗೆ ಯಾವ ರೋಗ ಲಕ್ಷಣವೂ ಇರಲಿಲ್ಲ ಎಂದು ಆಗ ತಿಳಿಸಲಾಗಿತ್ತು. ಬಳಿಕ ಇಂತಹ 24 ಪ್ರಕರಣಗಳು ವರದಿಯಾಗಿದ್ದನ್ನು ತಿಳಿಸಲಾಗಿತ್ತು. ಆದರೆ ಇದೀಗ ಒಂದು ಪ್ರಕರಣ ಹೊರತುಪಡಿಸಿ ಉಳಿದೆಲ್ಲಾ ಪ್ರಕರಣಗಳಲ್ಲೂ ಕೋವಿಡ್‌ ಲಕ್ಷಣಗಳು ಇದ್ದವು ಎಂದು ಹೇಳಿದ್ದಾರೆ. ಆಸ್ಪತ್ರೆಯಿಂದ ಕೋವಿಡ್‌ ಬುಲೆಟಿನ್‌ ಸಿದ್ಧಪಡಿಸುವ ಕೇಂದ್ರಕ್ಕೆ ಮಾಹಿತಿ ರವಾನೆಯಾಗುವ ಸಂದರ್ಭದಲ್ಲಿ ಆಗ ಕೆಲವೊಂದು ಸಂವಹನ ದೋಷದಿಂದಾಗಿ ಈ ಎಡವಟ್ಟು ಆಗಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಕ್ವಾರಂಟೈನ್‌ ಉಲ್ಲಂಘನೆ:14 ಎಫ್‌ಐಆರ್‌

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಕ್ವಾರಂಟೈನ್‌ ಉಲ್ಲಂಘಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ಹೀಗೆ ಉಲ್ಲಂಘಿಸಿದವರ ವಿರುದ್ಧ 14 ಎಫ್‌ಐಆರ್‌ಗಳು ದಾಖಲಾಗಿದ್ದರೆ. 9,588 ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ ಒಂದರಲ್ಲೇ ಹೀಗೆ ಎಚ್ಚರಿಕೆ ಪಡೆದವರ ಸಂಖ್ಯೆ 7,659.

ರಾಜ್ಯದ 9,352 ಪ್ರಕರಣಗಳ ಮೂಲವನ್ನು ಪತ್ತೆ ಹಚ್ಚುವ ಕೆಲಸ ಈಗಲೂ ಮುಂದುವರಿದಿದೆ. ಇದರಲ್ಲಿ 6,903 ಮಂದಿ ದೇಶದೊಳಗೆ ಸಂಚರಿಸಿದ ಇತಿಹಾಸ ಇದ್ದರೆ, 4,293 ಮಂದಿಗೆ ಪ್ರಥಮ ಅಥವಾ ದ್ವಿತೀಯ ಸಂಪರ್ಕದ ಇತಿಹಾಸ ಇದೆ. 1,900 ಐಎಲ್‌ಐ, 577 ಅಂತರರಾಷ್ಟ್ರೀಯ ಪ್ರಯಾಣ ಹಾಗೂ 449 ಸಾರಿ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.