ADVERTISEMENT

₹ 25 ಸಾವಿರ ಮೌಲ್ಯದ ದ್ವಿಚಕ್ರ ವಾಹನಕ್ಕೆ ₹ 1.34 ಲಕ್ಷ ದಂಡ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 20:48 IST
Last Updated 12 ಡಿಸೆಂಬರ್ 2023, 20:48 IST
ದ್ವಿಚಕ್ರ ವಾಹನ ಸವಾರ ಏಳುಮಲೈ ಅವರಿಗೆ ದಂಡ ಪಾವತಿ ರಶೀದಿ ನೀಡಿದ ಜಯನಗರ ಸಂಚಾರ ಠಾಣೆ ಪೊಲೀಸರು
ದ್ವಿಚಕ್ರ ವಾಹನ ಸವಾರ ಏಳುಮಲೈ ಅವರಿಗೆ ದಂಡ ಪಾವತಿ ರಶೀದಿ ನೀಡಿದ ಜಯನಗರ ಸಂಚಾರ ಠಾಣೆ ಪೊಲೀಸರು   

ಬೆಂಗಳೂರು: 225 ಬಾರಿ ಸಂಚಾರ ನಿಯಮ ಉಲ್ಲಂಘಿಸಿ ₹ 1.34 ಲಕ್ಷ ದಂಡ ಬಾಕಿ ಉಳಿಸಿಕೊಂಡಿದ್ದ ದ್ವಿಚಕ್ರ ವಾಹನ ಸವಾರ ಏಳುಮಲೈ ಅವರನ್ನು ಜಯನಗರ ಸಂಚಾರ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.

‘ಸ್ಥಳೀಯ ನಿವಾಸಿ ಏಳುಮಲೈ, ಕೂಲಿ ಕಾರ್ಮಿಕ. ಎರಡು ವರ್ಷಗಳಲ್ಲಿ 225 ಬಾರಿ ನಿಯಮ ಉಲ್ಲಂಘಿಸಿದ್ದರು. ದ್ವಿಚಕ್ರ ವಾಹನದ ಮೇಲೆ ₹ 1.34 ಲಕ್ಷ ದಂಡ ಪಾವತಿ ಬಾಕಿ ಇತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಠಾಣೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದ್ದವರ ಪಟ್ಟಿಯಲ್ಲಿ ಏಳುಮಲೈ ಹೆಸರು ಮೊದಲಿತ್ತು. ಹೀಗಾಗಿ, ಅವರ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗಿತ್ತು. ಅಷ್ಟಾದರೂ ಅವರು ದಂಡ ಪಾವತಿ ಮಾಡಿರಲಿಲ್ಲ. ವಿಶೇಷ ಕಾರ್ಯಾಚರಣೆ ನಡೆಸಿ, ಇತ್ತೀಚೆಗೆ ಅವರನ್ನು ಪತ್ತೆ ಮಾಡಲಾಯಿತು’ ಎಂದರು.

ADVERTISEMENT

‘ದ್ವಿಚಕ್ರ ವಾಹನ ಜಪ್ತಿ ಮಾಡಿ, ಠಾಣೆಗೆ ತರಲಾಗಿದೆ. ಜೊತೆಗೆ, ಏಳುಮಲೈ ಅವರಿಂದ 20 ನಿಯಮಗಳ ಉಲ್ಲಂಘನೆಗೆ ₹ 10 ಸಾವಿರ ದಂಡ ಪಾವತಿ ಮಾಡಿಸಿಕೊಳ್ಳಲಾಗಿದೆ. ಉಳಿದ ದಂಡದ ಮೊತ್ತ ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಸದ್ಯಕ್ಕೆ ಬೈಕ್ ಠಾಣೆ ಸುಪರ್ದಿಯಲ್ಲಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ನಿಯಮ ಉಲ್ಲಂಘನೆ ಅರಿವಿಲ್ಲ

‘ಏಳುಮಲೈ ಮನೆ ಸಮೀಪದ ರಸ್ತೆಯಲ್ಲಿ ನಿಯಮ ಉಲ್ಲಂಘನೆ ಪತ್ತೆಗಾಗಿ ಕ್ಯಾಮೆರಾ ಅಳವಡಿಸಲಾಗಿದೆ. ನಿತ್ಯವೂ ದ್ವಿಚಕ್ರ ವಾಹನದಲ್ಲಿ ಏಳುಮಲೈ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಹೆಲ್ಮೆಟ್ ಧರಿಸದ, ಸಿಗ್ನಲ್ ಜಂಪ್ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳ ಫೋಟೊಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ’ ಎಂದು ಪೊಲೀಸರು ಹೇಳಿದರು.

‘ನಿಯಮ ಉಲ್ಲಂಘನೆ ಬಗ್ಗೆ ಅರಿವಿರಲಿಲ್ಲವೆಂದು ಹೇಳಿರುವ ಏಳುಮಲೈ, ‘ನನ್ನ ದ್ವಿಚಕ್ರ ವಾಹನದ ಬೆಲೆ ₹ 25 ಸಾವಿರ ಮಾತ್ರ. ನಾನು ಹೇಗೆ ₹ 1.34 ಲಕ್ಷ ದಂಡ ಪಾವತಿಸಲಿ’ ಎಂದು ಪ್ರಶ್ನಿಸಿದರು. ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ಹೇಳಿ ನೋಟಿಸ್ ನೀಡಲಾಗಿದೆ. ದಂಡ ಪಾವತಿ ಮಾಡದಿದ್ದರೆ, ವಾರಂಟ್ ಜಾರಿಯಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.