ADVERTISEMENT

ಎಲ್ಲರಿಗೂ ಎ ಖಾತಾ: ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 22:30 IST
Last Updated 25 ಜುಲೈ 2025, 22:30 IST
   

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ವ್ಯಾಪ್ತಿಯಲ್ಲಿ ಮಾನ್ಯತೆ ಸಿಗದೆ, ಕಟ್ಟಡ ಕಟ್ಟಲು ನಕ್ಷೆ ಲಭಿಸದ ‘ಬಿ ಖಾತಾ’  ಹೊಂದಿರುವ ಹಾಗೂ ಹೊಂದಿರದ ಆಸ್ತಿಗಳಿಗೆ ಎ– ಖಾತಾ ನೀಡಲು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಬಿ ಖಾತಾ (ಯಾವುದೇ ಅನುಮೋದನೆ ಪಡೆಯದ ಬಡಾವಣೆಗಳಲ್ಲಿ ನಿರ್ಮಿಸಿದ ನಿವೇಶನ ಹಾಗೂ ಕಟ್ಟಡ) ಆಸ್ತಿ ಹೊಂದಿದವರು, ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಅದಕ್ಕೆ, ಪರಿಹಾರ ಕಲ್ಪಿಸಲು ಎಲ್ಲರಿಗೂ ಎ ಖಾತಾ ನೀಡಲು ಜುಲೈ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ಎ ಖಾತಾದ ಸಕಲ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಿದ್ದು, ಮಾರ್ಗಸೂಚಿ ದರದಂತೆ ಅಗತ್ಯವಾದ ಶುಲ್ಕ, ಅಭಿವೃದ್ಧಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಲ್ಕ ಪಾವತಿ ನಂತರ, ಇ–ಖಾತಾ ಸೇರಿದಂತೆ ಕಟ್ಟಡ ನಕ್ಷೆಯೂ ಲಭ್ಯವಾಗಲಿದೆ.

ADVERTISEMENT

‘ಬಿ’ ಖಾತಾ ಹೊಂದಿರುವ ಅಥವಾ ಯಾವುದೇ ಖಾತಾ ಹೊಂದಿರದ ನಿವೇಶನಗಳಿಗೆ ಆನ್‌ಲೈನ್‌ನಲ್ಲೇ ‘ಎ’ ಖಾತಾ, ‘ಇ’ ಖಾತಾ ನೀಡುವ ‘ಸಮಗ್ರ ತಂತ್ರಾಂಶ’ವನ್ನು ಬಿಬಿಎಂಪಿ ಅಳವಡಿಸಿಕೊಳ್ಳಲಿದೆ. ಕಾವೇರಿ ತಂತ್ರಾಂಶದೊಂದಿಗೆ ಮಾಹಿತಿ ಕಲೆಹಾಕುವುದು ಸೇರಿದಂತೆ ಕಂದಾಯ ಇಲಾಖೆ, ಬಿಬಿಎಂಪಿಯ ಕಂದಾಯ ವಿಭಾಗ, ನಗರ ಯೋಜನೆಯ ಅಧಿಕಾರಿಗಳು ‘ಸಮಗ್ರ ತಂತ್ರಾಂಶ’ ಮೂಲಕವೇ  ಎಲ್ಲ ರೀತಿಯ ಅನುಮೋದನೆಯನ್ನು ನೀಡಲಿದ್ದಾರೆ. ನಿವೇಶನ ‘ಎ’ ಖಾತಾವಾಗಿ ಕಾನೂನುಬದ್ಧವಾಗಲು ಪಾವತಿಸಬೇಕಾದ ಶುಲ್ಕದ ಲೆಕ್ಕಾಚಾರವೂ ಆನ್‌ಲೈನ್‌ನಲ್ಲೇ ಆಗಲಿದೆ. ಈ ಪ್ರಕ್ರಿಯೆ ಆಗಸ್ಟ್‌ 15ರ ವೇಳೆಗೆ ಜಾರಿಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.