ADVERTISEMENT

ಬೆಂಗಳೂರಿಗೆ ನೀರು | ಪ್ರತ್ಯೇಕ ವ್ಯವಸ್ಥೆ ಅಗತ್ಯ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 0:05 IST
Last Updated 14 ಫೆಬ್ರುವರಿ 2024, 0:05 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಪ್ರತಿ ವರ್ಷವೂ ಬೆಂಗಳೂರು ನಗರದ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಳವಾಗುತ್ತಿದೆ. ನಗರಕ್ಕೆ ನೀರು ಪೂರೈಸುವುದಕ್ಕೆ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ’ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಮಂಗಳವಾರ ಉತ್ತರಿಸಿದ ಅವರು, ‘ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 6.5 ಟಿಎಂಸಿ ಅಡಿ ನೀರು ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಕೃಷಿ ಬಳಕೆಯಲ್ಲಿ ಉಳಿತಾಯವಾಗುವ 1.5 ಟಿಎಂಸಿ ಅಡಿ ನೀರನ್ನು ಈ ಉದ್ದೇಶಕ್ಕೆ ಬಳಸಲು ಯೋಚಿಸಲಾಗಿದೆ’ ಎಂದರು.

ಭವಿಷ್ಯದ ದಿನಗಳಲ್ಲಿ ರಾಜಧಾನಿಗೆ ನೀರು ಪೂರೈಸುವುದು ದೊಡ್ಡ ಸವಾಲಾಗಲಿದೆ. ಅದನ್ನು ಎದುರಿಸಲು ಸಿದ್ಧತೆ ಆರಂಭಿಸಬೇಕಿದೆ ಎಂದರು.

ADVERTISEMENT

‘ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 13 ಕೊಳೆಗೇರಿಗಳಿದ್ದು ಅಲ್ಲಿಗೆ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ರಾಗಿಗುಡ್ಡದ 2,500 ಫ್ಲ್ಯಾಟ್‌ ಮತ್ತು ರಾಜೇಶ್ವರಿ ಕೊಳೆಗೇರಿ ಪ್ರದೇಶದ 400 ಫ್ಲ್ಯಾಟ್‌ಗಳಿಗೆ ನೀರು ಪೂರೈಸುತ್ತಿಲ್ಲ. ಬೆಂಗಳೂರು ಜಲ ಮಂಡಳಿಗೆ ಶುಲ್ಕ ಪಾವತಿಸದೇ ಇರುವುದರಿಂದ ಸಮಸ್ಯೆಯಾಗಿದೆ. ಅಲ್ಲಿಗೆ ಕಾವೇರಿ ನೀರು ಪೂರೈಕೆಗೆ ತಕ್ಷಣ ವ್ಯವಸ್ಥೆ ಮಾಡಬೇಕು’ ಎಂದು ರಾಮಮೂರ್ತಿ ಆಗ್ರಹಿಸಿದರು.

ಎಲ್ಲ ಕೊಳೆಗೇರಿ ನಿವಾಸಿಗಳಿಗೆ ತಿಂಗಳಿಗೆ 10,000 ಲೀಟರ್‌ ನೀರನ್ನು ಉಚಿತವಾಗಿ 2027ರಿಂದಲೇ ಪೂರೈಸಲಾಗುತ್ತಿದೆ. 2013ರಿಂದ ಜಲ ಮಂಡಳಿಯು ನೀರಿನ ದರ ಏರಿಕೆ ಮಾಡಿಲ್ಲ. ಈಗ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಶುಲ್ಕ ಪಾವತಿಸಿದರೆ 2,900 ಫ್ಲ್ಯಾಟ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

‘ಮೇಕೆದಾಟು ಯೋಜನೆಗೆ ಸಹಕರಿಸಿ’:

‘ಬೆಂಗಳೂರಿನ ನೀರಿನ ಸಮಸ್ಯೆಗೆ ಮೇಕೆದಾಟು ಯೋಜನೆಯೇ ಪರಿಹಾರ. ಈ ಯೋಜನೆ ಅನುಷ್ಠಾನಕ್ಕೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದೇವೆ. ನೀವೆಲ್ಲರೂ ಸಹಕಾರ ನೀಡಿ’ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.