ಬೆಂಗಳೂರು: ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಸಚ್ಚಾರಿತ್ರ್ಯ ತೋರಿದರೂ ಅದರ ಕಡತ ರಾಜ್ಯಪಾಲರ ಕಚೇರಿಗೆ ಹೋಗಿ ವಾಪಸ್ಸಾಗುತ್ತಿತ್ತು. ಒಂದು ಬಾರಿ ರಾಜ್ಯಪಾಲರೇ ಕೈದಿಗಳ ನಾಟಕ ನೋಡಿದ ಮೇಲೆ ಇಂಥವರು ಹೊರಗೆ ಇರಬೇಕು ಎಂದು ಕಡತಕ್ಕೆ ಸಹಿ ಹಾಕಿ ಬಿಡುಗಡೆ ಮಾಡಿದ್ದರು.
ಸುಮಾರು 25 ವರ್ಷಗಳ ಹಿಂದಿನ ಘಟನೆ ಇದು. ನಾಟಕ ನೋಡಿದವರು ಆಗಿನ ರಾಜ್ಯಪಾಲರಾದ ವಿ.ಎಸ್. ರಮಾದೇವಿ. ನಾಟಕ ಮಾಡಿಸಿದವರು ‘ಸಂಕಲ್ಪ’ ಮೈಸೂರು ಸಂಸ್ಥೆಯ ಸದಸ್ಯರು.
10 ವರ್ಷಕ್ಕಿಂತ ಅಧಿಕ ಸಜೆ ಅನುಭವಿಸಿದ, ಸನ್ನಡತೆ ಇರುವ ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಿ ಎಂದು ಆಗ ರಮಾದೇವಿ ಸಹಿ ಹಾಕಿದ್ದನ್ನು, ಅದರಲ್ಲಿ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡವರೇ ಅಧಿಕ ಇದ್ದಿದ್ದನ್ನು ರಂಗನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಬಿಚ್ಚಿಟ್ಟರು. ಭಾನುವಾರ ನಡೆದ ‘ಜೈಲಿನಿಂದ ಬಯಲಿಗೆ... ಬದಲಾದ ಬದುಕು’ ಒಂದು ಮೆಲುಕು ಕಾರ್ಯಕ್ರಮ ಇದಕ್ಕೆ ವೇದಿಕೆಯಾಯಿತು.
‘ಮಾರನಾಯಕನ ದೃಷ್ಟಾಂತ’, ‘ಜೂಲಿಯಸ್ ಸೀಸರ್’, ‘ಬ್ಯಾರಿಸ್ಟರ್ ಗಾಂಧಿ’, ‘ಬಸವಣ್ಣ’, ‘ಜೊತೆಗಿರುವನು ಚಂದಿರ’ ಸಹಿತ ವಿವಿಧ ನಾಟಕಗಳಲ್ಲಿ ಪಾತ್ರಧಾರಿಗಳಾಗಿದ್ದ, ಆನಂತರ ಜೈಲಿನಿಂದ ಬಿಡುಗಡೆಗೊಂಡ ಮೈಸೂರು ಕರಿಮದ್ದನಹಳ್ಳಿಯ ಮಂಜೇಗೌಡ, ಪ್ರಕಾಶ್, ಸೋಮಶೇಖರ್, ಬೋಗಾದಿ ಮಹೇಶ್’ ಆಡುವಳ್ಳಿ ಎಸ್.ವಿ. ರಮೇಶ್, ಗಣೇಶ್ ನಾಯ್ಕ್, ಪ್ರಶಾಂತ್ ಮೈಸೂರು, ಹಾಡುಗಾರ ಬಾಗಳಿ ಮಹೇಶ್ ಇನ್ನಿತರರು ಅನುಭವ ಹಂಚಿಕೊಂಡರು.
‘ಕೊಲೆಗಾರನಾಗಿ ಜೈಲಲ್ಲಿದ್ದೆ. ನಾಟಕ ಮಾಡುತ್ತಿದ್ದೆ. ಒಂದು ಬಾರಿ ಪೆರೋಲ್‌ನಲ್ಲಿ ಹೊರಗೆ ಬಂದಿದ್ದೆ. ವಾಪಸ್ ಹೋಗಿ ನಾಟಕ ಮಾಡುವಾಗ ತಪ್ಪಾಗಿತ್ತು. ಆಗ ಕಟ್ಟಿಮನಿಯವರು ಮೂರು ದಿನ ಕುಡಿತ ಬಿಟ್ಟುಬಿಡು ಎಂದು ಸಲಹೆ ನೀಡಿದರು. ಅಂದು ಕುಡಿತ ಬಿಟ್ಟವನು ಇಂದಿನವರೆಗೆ ಕುಡಿದಿಲ್ಲ’ ಎಂದು ಎಸ್.ವಿ. ರಮೇಶ್ ನೆನಪು ಮಾಡಿಕೊಂಡರು.
‘ಕೊಲೆ ಆರೋಪದೊಂದಿಗೆ, ಹುಡುಗಿಯನ್ನು ಪ್ರೀತಿಸಿದ್ದ ಕಾರಣಕ್ಕೆ ದಾಖಲಿಸಿದ ಪ್ರಕರಣ ಸಹಿತ ಮೂರು ಪ್ರಕರಣಗಳು ದಾಖಲಾಗಿದ್ದವು. 2005ರಲ್ಲಿ ಜೈಲು ಸೇರಿದ್ದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಇಂಥ ಸಮಯದಲ್ಲಿ ನಾಟಕ ನನಗೆ ಹೊಸ ಬದುಕು ನೀಡಿತು. ಪಿಯುಸಿ ಮಾಡಿ ಜೈಲು ಸೇರಿದ್ದ ನಾನು ಬಿಡುಗಡೆಗೊಳ್ಳುವ ಹೊತ್ತಿಗೆ ದೂರಶಿಕ್ಷಣದ ಮೂಲಕ ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದೆ. ಇದಕ್ಕೆ ನಾಟಕ ಪ್ರೇರಣೆ’ ಎಂದು ಪ್ರಶಾಂತ್ ಮೈಸೂರು ಸ್ಮರಿಸಿದರು.
‘ಪರಿವರ್ತನೆ ಮನೆಗೂ ಸಮಾಜಕ್ಕೂ ಒಳ್ಳೆಯದು’
ಕೈದಿಯೊಬ್ಬ ಪರಿವರ್ತನೆಯಾದರೆ ಅವರ ಮನೆಗಷ್ಟೇ ಅಲ್ಲ ಸಮಾಜಕ್ಕೂ ಒಳ್ಳೆಯದು ಎಂದು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.
‘ರಾಜ್ಯದಲ್ಲಿ ಒಂಬತ್ತು ಕೇಂದ್ರ ಕಾರಾಗೃಹಗಳು ಸೇರಿ 54 ಕಾರಾಗೃಹಗಳಿವೆ. ಅದರಲ್ಲಿ 15 ಸಾವಿರ ಕೈದಿಗಳು ಇದ್ದಾರೆ. ಶೇಕಡ 25ರಷ್ಟು ಮಂದಿ ಸಜೆಗೆ ಒಳಗಾದವರು ಶೇ 75ರಷ್ಟು ವಿಚಾರಣಾಧೀನ ಕೈದಿಗಳು ಇದ್ದಾರೆ. ಸರ್ಕಾರದಿಂದ ಅನುದಾನ ಕಡಿಮೆಯಾದರೂ ಎಲ್ಲ ಜೈಲುಗಳಲ್ಲಿ ಕೈದಿಗಳ ಮನ ಪರಿವರ್ತನೆಗಾಗಿ ನಾಟಕ ಕಲೆ ಸಹಿತ ಎಲ್ಲ ಚಟುವಟಿಕೆಗಳನ್ನು ಕಾರ್ಪೋರೇಟ್ ಸಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಪಡೆದಾದರೂ ಮುಂದುವರಿಸುತ್ತೇವೆ’ ಎಂದು ಹೇಳಿದರು.
ಕೈದಿ ಎಂಬ ಹಣೆಪಟ್ಟಿ ಇರುವವರು ನಾಟಕ ಸಂಗೀತ ಕಲೆಗಳ ಮೂಲಕ ಜನರಿಂದ ಚಪ್ಪಾಳೆ ಗಿಟ್ಟಿಸುವುದೇ ಪವಿತ್ರ ಕಾರ್ಯ. ಅದುವೇ ಅಧ್ಯಾತ್ಮ. ಪ್ರತಿಭೆ ವ್ಯಕ್ತಿಗತವಾಗಿರುತ್ತದೆ. ವಿಕಾಸ ಸಂಯುಕ್ತವಾಗಿರುತ್ತದೆ. ವಿಕಾಸವೇ ಮುಖ್ಯ. ಇಲ್ಲಿ ನಾಟಕಗಳು ವಿಕಾಸದ ಕೆಲಸ ಮಾಡಿವೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಶ್ಲಾಘಿಸಿದರು.
ನೂರಾರು ಜನರ ಮನಸ್ಸನ್ನು ಪರಿವರ್ತನೆ ಮಾಡುವುದು ಕಷ್ಟ. ಅಂಥ ಕಷ್ಟದ ಕೆಲಸವನ್ನು ‘ಸಂಕಲ್ಪ’ ಮಾಡುತ್ತಿದೆ. ಕೈದಿಗಳ ಮನ ಪರಿವರ್ತನೆಯ ಜೊತೆಗೆ ಜೈಲಿನ ಅಧಿಕಾರಿಗಳ ಮನಸ್ಸೂ ಪರಿವರ್ತನೆಯಾಗಬೇಕು ಎಂದು ಜಂಟಿ ಪೊಲೀಸ್ ಕಮಿಷನರ್ ಅನುಚೇತ್ ತಿಳಿಸಿದರು.
ಸಂಕಲ್ಪದ ಗೋಪಾಲ್ ಹೊಸೂರು ನಿವೃತ್ತ ಜೈಲು ಸೂಪರಿಂಟೆಂಡೆಂಟ್ ಜಯರಾಮಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.