ADVERTISEMENT

ಮುಂದಿನ ಫೆಬ್ರುವರಿಯಿಂದ ಏಕರೂಪದ ಡಿ.ಎಲ್‌, ಆರ್‌ಸಿ

ಬಾಲಕೃಷ್ಣ ಪಿ.ಎಚ್‌
Published 7 ಡಿಸೆಂಬರ್ 2023, 0:03 IST
Last Updated 7 ಡಿಸೆಂಬರ್ 2023, 0:03 IST
   

ಬೆಂಗಳೂರು: ದೇಶದಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್‌), ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಇರಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ರಾಜ್ಯದಲ್ಲಿ 2024ರ ಫೆಬ್ರುವರಿಯಲ್ಲಿ ಜಾರಿಗೆ ಬರಲಿದೆ. ಇನ್ನು ಮುಂದೆ ಡಿಎಲ್‌, ಆರ್‌ಸಿಗಳಲ್ಲಿ ಕ್ಯೂಆರ್‌ ಕೋಡ್‌ ಕೂಡ ಇರಲಿದೆ.

ಒಂದು ದೇಶದಲ್ಲಿ ಒಂದೇ ಮಾದರಿಯ ಸ್ಮಾರ್ಟ್‌ಕಾರ್ಡ್‌ ಇರಬೇಕು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಛತ್ತೀಸಗಡ, ಹಿಮಾಚಲ ಪ್ರದೇಶ, ತಮಿಳುನಾಡು ಸಹಿತ ಕೆಲವು ರಾಜ್ಯಗಳು ಇದನ್ನು ಜಾರಿಗೆ ತಂದಿದ್ದವು.

ರಾಜ್ಯದಲ್ಲಿ ಸ್ಮಾರ್ಟ್‌ಕಾರ್ಡ್‌ ಪೂರೈಕೆಯ ಗುತ್ತಿಗೆ ಪಡೆದಿರುವ ಕಂಪನಿಯ 15 ವರ್ಷಗಳ ಅವಧಿ ಫೆಬ್ರುವರಿಗೆ ಮುಕ್ತಾಯಗೊಳ್ಳಲಿದೆ. ಹೊಸದಾಗಿ ಗುತ್ತಿಗೆ ಪಡೆಯುವ ಏಜೆನ್ಸಿ ಅಥವಾ ಕಂಪನಿ ಹೊಸಮಾದರಿಯ ಡಿಎಲ್‌, ಆರ್‌ಸಿ ಕಾರ್ಡ್‌ಗಳನ್ನು ಪೂರೈಸಲಿದೆ. ಸಾರಿಗೆ ಇಲಾಖೆಯು ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ADVERTISEMENT

ವಿಶೇಷತೆ: ಸ್ಮಾರ್ಟ್‌ಕಾರ್ಡ್‌ನಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಡಿಎಲ್‌ ಹೊಂದಿರುವವರ ಪೂರ್ಣ ಮಾಹಿತಿ ಸಿಗಲಿದೆ. ಸಂಚಾರದ ಅವಧಿಯಲ್ಲಿ ಪೊಲೀಸರು ಅಥವಾ ಸಾರಿಗೆ ಇಲಾಖೆಯ ಸಿಬ್ಬಂದಿ ಸುಲಭವಾಗಿ ತಪಾಸಣೆ ಮಾಡಬಹುದು. ಈವರೆಗೆ ಸ್ಮಾರ್ಟ್‌ ಕಾರ್ಡ್‌ನಲ್ಲಿ ಚಿಪ್‌ ಮಾತ್ರ ಇತ್ತು. ಚಿಪ್‌ನಲ್ಲಿ ಇರುವ ವಿವರಗಳನ್ನು ನೋಡಲು ಸಾರಿಗೆ ಕಚೇರಿ ಇಲ್ಲವೇ ಪೊಲೀಸ್‌ ಸ್ಟೇಷನ್‌ಗೆ ಬರಬೇಕಿತ್ತು. ಕ್ಯೂ ಆರ್ ಕೋಡ್‌  ಸೌಲಭ್ಯದಿಂದ, ಇದು ತಪ್ಪಲಿದೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್‌ ಮಾಹಿತಿ ನೀಡಿದರು.

ಡಿಎಲ್‌ನಲ್ಲಿ ಕಾರ್ಡ್‌ದಾರರ ಹೆಸರು, ಫೋಟೊ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು, ಮೊಬೈಲ್‌ ಸಂಖ್ಯೆ, ತುರ್ತು ಸಂಪರ್ಕ ಸಂಖ್ಯೆ ಸಹಿತ 25ಕ್ಕೂ ಹೆಚ್ಚು ಮಾಹಿತಿ ಇರಲಿದೆ. ಚಿಪ್‌ ಮತ್ತು ಕ್ಯೂಆರ್‌ ಕೋಡ್‌ಗಳು ಕೂಡ ಇರಲಿವೆ. ಆರ್‌ಸಿ ಕಾರ್ಡಿನ ಮುಂಭಾಗದಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾನ್ಯತಾ ಅವಧಿ, ಚಾಸಿಸ್‌, ಎಂಜಿನ್‌ ಸಂಖ್ಯೆ, ಮಾಲೀಕರ ವಿವರ ಮತ್ತು ವಿಳಾಸ ಇರಲಿದೆ. ಹಿಂಭಾಗದಲ್ಲಿ ಕ್ಯೂಆರ್‌ ಕೋಡ್‌ನೊಂದಿಗೆ ವಾಹನ ತಯಾರಿಕಾ ಕಂಪನಿ ಹೆಸರು, ಮಾಡೆಲ್‌, ವಾಹನದ ಶೈಲಿ, ಆಸನ ಸಾಮರ್ಥ್ಯ ಮತ್ತು ಸಾಲ ನೀಡಿದ ಸಂಸ್ಥೆಗಳ ವಿವರಗಳೂ ಇರುತ್ತವೆ.

’ಕ್ಯೂಆರ್‌ ಕೋಡ್‌ ಸೇರ್ಪಡೆಯಿಂದಾಗಿ ಸಂಚಾರ ಪೊಲೀಸರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳಿಗೆ, ವಾಹನ ಚಾಲಕರು ಹಾಗೂ ಮಾಲೀಕರ ವಿವರಗಳ ದೃಢೀಕರಣವನ್ನು ಸುಲಭವಾಗಿ ಪರಿಶೀಲಿಸಲು ಅನುಕೂಲವಾಗಲಿದೆ’ ಎಂದು ಸಾರಿಗೆ ಆಯುಕ್ತ ಎ.ಎಂ. ಯೋಗೀಶ್ ತಿಳಿಸಿದರು.

ಕಾರ್ಡ್‌ ಗುಣಮಟ್ಟವೂ ಬದಲು: ಈಗ ನೀಡುತ್ತಿರುವ ಸ್ಮಾರ್ಟ್‌ಕಾರ್ಡ್‌ಗಳನ್ನು ಪಾಲಿ ವಿನೈಲ್‌ ಕ್ಲೊರೈಡ್‌ (ಪಿವಿಸಿ) ಕಾರ್ಡ್‌ಗಳಾಗಿವೆ. ಇದರಲ್ಲಿ ವರ್ಷ ಕಳೆದಂತೆ ಕಾರ್ಡ್‌ ಮೇಲಿನ ಅಕ್ಷರಗಳು ಅಳಿಸಿ ಹೋಗುವ, ಕಾರ್ಡ್‌ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಹೊಸ ಸ್ಮಾರ್ಟ್‌ಕಾರ್ಡ್‌ಗಳು ಪಾಲಿ ಕಾರ್ಬೊನೇಟ್‌ ಆಗಿರುತ್ತವೆ. ಇವು ಮುರಿಯುವುದಿಲ್ಲ, ಅಕ್ಷರ ಅಳಿಸಿ ಹೋಗುವುದಿಲ್ಲ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದರು.

ಹೊಸ ಡಿಎಲ್‌ ಆರ್‌ಸಿ ಪಡೆಯುವವರಿಗೆ ಏಕರೂಪದ ಸ್ಮಾರ್ಟ್‌ಕಾರ್ಡ್‌ ನೀಡಲಾಗುವುದು. ಹಳೇ ಡಿಲ್‌ಗಳನ್ನು ನವೀಕರಣ ವೇಳೆ ಬದಲಾಯಿಸಲಾಗುವುದು
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.