ADVERTISEMENT

ರಸ್ತೆ ಗುಂಡಿಗಳಿಗೆ ಪೂಜೆ, ಹೂವಿನ ಅಲಂಕಾರ!; ಆಮ್‌ ಆದ್ಮಿ ಪಕ್ಷದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:45 IST
Last Updated 20 ಅಕ್ಟೋಬರ್ 2021, 16:45 IST
ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಗಾಂಧಿ ಬಜಾರ್‌ ಮುಖ್ಯರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಪ್ರತಿಭಟಿಸಿದರು–ಪ್ರಜಾವಾಣಿ ಚಿತ್ರ  
ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಗಾಂಧಿ ಬಜಾರ್‌ ಮುಖ್ಯರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಪ್ರತಿಭಟಿಸಿದರು–ಪ್ರಜಾವಾಣಿ ಚಿತ್ರ     

ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ಲಕ್ಷ್ಯ ತೋರುತ್ತಿರುವ ಬಿಬಿಎಂಪಿ ಧೋರಣೆಯನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷವು ನಗರದಾದ್ಯಂತ ‘ರಸ್ತೆ ಗುಂಡಿಗಳ ಹಬ್ಬ‌’ ಆಚರಿಸಿತು. ಗುಂಡಿಗಳನ್ನು ಹೂವಿನಿಂದ ಸಿಂಗರಿಸಿ, ಪೂಜೆ ಮಾಡಿ ಪ್ರತಿಭಟಿಸಲಾಯಿತು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯನಗರ ವಾರ್ಡ್‌,ಸರ್‌.ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಜೀವನ್‌ಬಿಮಾ ನಗರ, ಕಸ್ತೂರಿ ನಗರ, ಮಹದೇವ‍ಪುರದ ಬೆಳ್ಳಂದೂರು ವಾರ್ಡ್‌, ಬೊಮ್ಮನಹಳ್ಳಿ, ಯಲಹಂಕ, ಸರ್ವಜ್ಞನಗರದ ಗೋವಿಂದಪುರ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಹಳೆ ಬೈಯಪ್ಪನಹಳ್ಳಿ ಹಾಗೂ ಕಲ್ಪಹಳ್ಳಿ ಮುಖ್ಯರಸ್ತೆಯಲ್ಲಿ ಹುಲ್ಲಿನ ನಾಟಿ ಮಾಡುವ ಮೂಲಕ‍ಪ್ರತಿಭಟಿಸಲಾಯಿತು. ಕೆಲವೆಡೆ ಗುಂಡಿಗಳ ಸುತ್ತ ರಂಗೋಲಿ ಬಿಡಿಸಲಾಗಿತ್ತು. ಹಣತೆ ಹಚ್ಚಿ ಅವುಗಳ ಮೇಲೆ ಇಡಲಾಗಿತ್ತು.

ADVERTISEMENT

‘ವಾಹನ ಸವಾರರೇ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು’, ‘ನಮ್ಮ ಬೆಂಗಳೂರು ಗುಂಡಿಗಳ ತವರೂರು’ ಎಂಬ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ‘ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ ಸುಮಾರು ₹20 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಹೀಗಿದ್ದರೂ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರದ ಹಣ ಯಾರ ಜೇಬು ಸೇರಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ರಸ್ತೆ ಅಭಿವೃದ್ಧಿ ಯೋಜನೆಗಳ ಅನುದಾನದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾಹನ ಸವಾರರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಕಾಟಾಚಾರಕ್ಕೆ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದ್ದು, ಸಣ್ಣ ಮಳೆಗೆ ಅವು ಕಿತ್ತು ಹೋಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.