ADVERTISEMENT

ದಿನೇಶ್‌ ಗುಂಡೂರಾವ್‌ಗೆ ಕ್ಷೇತ್ರಕ್ಕಿಂತ ಕಾಂಗ್ರೆಸ್‌ ಉಸ್ತುವಾರಿಯೇ ಮುಖ್ಯ; ಎಎಪಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 21:48 IST
Last Updated 27 ಅಕ್ಟೋಬರ್ 2021, 21:48 IST
   

ಬೆಂಗಳೂರು: ‘ಗಾಂಧಿನಗರ ಕ್ಷೇತ್ರದಲ್ಲಿ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಪರದಾಡುತ್ತಿರುವ ಜನರಸಮಸ್ಯೆಗಳನ್ನು ಪರಿಹರಿಸುವ ಬದಲು ಕ್ಷೇತ್ರದ ಶಾಸಕ ದಿನೇಶ್‌ ಗುಂಡೂರಾವ್‌ ಕಾಣೆಯಾಗಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಟೀಕಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿನೇಶ್‌ ಗುಂಡೂರಾವ್‌ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿ, ಹೊರ ರಾಜ್ಯಗಳಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಅವರಿಗೆ ಶಾಸಕ ಸ್ಥಾನಕ್ಕಿಂತ ಗೋವಾ ಮತ್ತು ತಮಿಳುನಾಡಿನ ಕಾಂಗ್ರೆಸ್‌ ಉಸ್ತುವಾರಿಯೇ ಮುಖ್ಯವಾಗಿದೆ. ಆದರೆ, ಅವರಿಗೆ ಮತ ನೀಡಿದ ಕ್ಷೇತ್ರದ ಜನ ತೊಂದರೆಗಳಲ್ಲಿ ಸಿಲುಕಿದ್ದಾರೆ’ ಎಂದರು.

‘ನೆರೆ ರಾಜ್ಯಗಳಿಗೆ ಪಲಾಯನ ಮಾಡಿರುವ ಅವರು ಇನ್ನಾದರೂ ವಾಪಸ್‌ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಸಾಧ್ಯವಾಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದರು.

ADVERTISEMENT

ಗಾಂಧಿನಗರ ಘಟಕದ ಎಎಪಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ, ‘ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಆಟಾಟೋಪ ಮೀತಿಮೀರಿದ್ದು, ಇಲ್ಲಿನ ಸಮಸ್ಯೆ ಪ್ರಶ್ನಿಸುವ ಪಕ್ಷದ ಮುಖಂಡರಿಗೆ ಧಮ್ಕಿ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಸ್ತೆ ಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಲು 57 ಅನುಭವಿ ವಕೀಲರ ತಂಡ ರಚಿಸಲಾಗಿದೆ. ಕರ್ತವ್ಯದಲ್ಲಿ ಲೋಪ ಹಾಗೂ ಅಕ್ರಮದಲ್ಲಿ ಭಾಗಿಯಾದವರಿಗೆ ಕಾನೂನು ಮೂಲಕವೇ ಉತ್ತರ ನೀಡಲಿದ್ದೇವೆ’ ಎಂದುಪಕ್ಷದ ವಕೀಲರ ಘಟಕದ ಅಧ್ಯಕ್ಷ ಮಂಜುನಾಥ ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.