ADVERTISEMENT

ಜಿಬಿಎಗೆ ಉಪ ಲೋಕಾಯುಕ್ತರನ್ನು ನೇಮಿಸಿ: ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 14:54 IST
Last Updated 5 ಡಿಸೆಂಬರ್ 2025, 14:54 IST
ಎಎಪಿ
ಎಎಪಿ   

ಬೆಂಗಳೂರು: ‘ಜಿಬಿಎ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಪಾರದರ್ಶಕತೆ ತರಲು ಪ್ರತ್ಯೇಕವಾಗಿ ಉಪ ಲೋಕಾಯುಕ್ತರನ್ನು ನೇಮಿಸಬೇಕು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈ ಹಿಂದೆ ಅಸ್ತಿತ್ವದಲ್ಲಿದ್ದ ಬಿಬಿಎಂಪಿ ಆಡಳಿತದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಆರೋಪಿಗಳಿಂದ ಇದುವರೆಗೂ ಬಿಡಿಗಾಸು ಸಹ ಜಪ್ತಿ ಮಾಡಲು ಸಾಧ್ಯವಾಗಿಲ್ಲ. ಯಾರಿಗೂ ಶಿಕ್ಷೆಯೂ ಆಗಿಲ್ಲ. ಇದೇ ರೀತಿಯ ಭ್ರಷ್ಟ ಆಡಳಿತ ಸದ್ಯ ಜಿಬಿಎದಲ್ಲಿ ನಡೆಯುತ್ತಿದೆ. ಉಪ ಲೋಕಾಯುಕ್ತರಿಗೆ ಜಿಬಿಎ ಕೇಂದ್ರ ಕಚೇರಿಯಲ್ಲಿಯೇ ಸಕಲ ವ್ಯವಸ್ಥೆಗಳುಳ್ಳ ಕಚೇರಿಯನ್ನು ನೀಡಬೇಕು’ ಎಂದು ಒತ್ತಾಯಿಸಿದರು. 

ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ, ‘ಈಗಿರುವ ಕಾನೂನಿನಲ್ಲಿ ಗುತ್ತಿಗೆದಾರರನ್ನು ನೇರವಾಗಿ ಆರೋಪಿಗಳಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟ ಗುತ್ತಿಗೆದಾರರನ್ನೂ ಕಾನೂನಿನ ಅಂಕುಶಕ್ಕೆ ಒಳಪಡಿಸಬೇಕು’ ಎಂದರು. 

ADVERTISEMENT

ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ರಾಜ್ಯ ಕಾರ್ಯದರ್ಶಿ ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.